ಬೆಳಗಾವಿ: ಮೈತ್ರಿ ಸರ್ಕಾರ ಪತನ ಹಾಗೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾಗಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿ ಉಸ್ತುವಾರಿ ಹೊಣೆಯನ್ನು ವಹಿಸಲಾಗಿದೆ. ಡಿಸಿಎಂ ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ಮೂಲ ಬಿಜೆಪಿಗರಿದ್ದರೂ, ರಮೇಶ್ ಜಾರಕಿಹೊಳಿ ಎರಡನೇ ರಾಜಧಾನಿ ಎಂಬ ಕೀರ್ತಿಗೆ ಪಾತ್ರವಾಗಿರುವ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದಾರೆ.
ರಮೇಶ್ ಜಾರಕಿಹೊಳಿಗೆ ಉಸ್ತುವಾರಿ ಜವಾಬ್ದಾರಿ ನೀಡಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಉಸ್ತುವಾರಿ ವಿಚಾರದಲ್ಲಿ ಸಿಎಂ ಕೊನೆಗೂ ಸ್ಥಳೀಯರಿಗೆ ಆದ್ಯತೆ ನೀಡಿದ್ದಾರೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರಿಗೆ ಧಾರವಾಡ ಜತೆಗೆ ಬೆಳಗಾವಿ ಜಿಲ್ಲೆಯ ಉಸ್ತುವಾರಿ ವಹಿಸಲಾಗಿತ್ತು. ಜಿಲ್ಲೆಯ ಡಿಸಿಎಂ ಸಹಿತ ನಾಲ್ವರು ಸಚಿವರಿದ್ದರೂ ಜಗದೀಶ್ ಶೆಟ್ಟರ್ ಅವರಿಗೆ ಉಸ್ತುವಾರಿ ಸಚಿವ ಸ್ಥಾನ ವಹಿಸಿರುವುದು ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಗೋಕಾಕ್ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ರಮೇಶ್ ಜಾರಕಿಹೊಳಿಗೆ ಉಸ್ತುವಾರಿ ಜವಾಬ್ದಾರಿ ವಹಿಸಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಹಠಕ್ಕೆ ಬಿದ್ದು ಜಲಸಂಪನ್ಮೂಲ ಖಾತೆ ಪಡೆದಿದ್ದ ರಮೇಶ್ ಜಾರಕಿಹೊಳಿ ಅವರು ಬೆಳಗಾವಿ ಉಸ್ತುವಾರಿ ಪಡೆಯುವ ಮೂಲಕ ಮತ್ತೊಮ್ಮೆ ಮೇಲುಗೈ ಸಾಧಿಸಿದ್ದಾರೆ.
ರಮೇಶ್ಗೆ ಬಯಸದೇ ಬಂದ ಭಾಗ್ಯ: ಜಲಸಂಪನ್ಮೂಲ ಇಲಾಖೆ ವ್ಯಾಪ್ತಿ ದೊಡ್ಡದಿರುವ ಕಾರಣ ಜವಾಬ್ದಾರಿಯೂ ಹೆಚ್ಚಿರುತ್ತದೆ. ಈ ಕಾರಣಕ್ಕೆ ರಮೇಶ್ ಜಾರಕಿಹೊಳಿ ಬೆಳಗಾವಿ ಉಸ್ತುವಾರಿ ಬೇಡ. ಜಗದೀಶ ಶೆಟ್ಡರ್ ಇದ್ರೆ ನಾನೇ ಉಸ್ತುವಾರಿ ಇದ್ದಂಗೆ ಎನ್ನುತ್ತಲೇ ಬಂದಿದ್ದರು. ಬಿಜೆಪಿ ಹಿರಿಯ ಶಾಸಕ ಉಮೇಶ ಕತ್ತಿ ಸಂಪುಟ ಸೇರಿಸಿಕೊಂಡು ಬೆಳಗಾವಿ ಉಸ್ತುವಾರಿ ಹೊಣೆಯನ್ನು ನೀಡುವ ಚಿಂತನೆಯಲ್ಲಿ ಸಿಎಂ ಇದ್ದರು. ಆದರೆ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಭೋಜನ ಕೂಟ ಆಯೋಜಿಸಿದ್ದ ಉಮೇಶ್ ಕತ್ತಿಗೆ ಸರ್ಕಾರ ಹಾಗೂ ಬಿಜೆಪಿ ಪಕ್ಷಕ್ಕೆ ಮುಜುಗರ ತಂದಿದ್ದರು. ಸಂಪುಟ ವಿಸ್ತರಣೆ ಮುಂಚೆಯೇ ರಮೇಶ್ ಜಾರಕಿಹೊಳಿಗೆ ಉಸ್ತುವಾರಿ ನೀಡಿರುವ ಸಿಎಂ ನಡೆ ಕುತೂಹಲ ಕೆರಳಿಸಿದೆ.
ಸಿಎಂ ಬೆನ್ನಿಗೆ ನಿಂತು ಮತ್ತೇ ಲಾಭ ಪಡೆದ ರಮೇಶ್: ಉಮೇಶ್ ಕತ್ತಿ ಅವರು ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಕೆಲ ದಿನಗಳ ಹಿಂದೆಯಷ್ಟೇ ಔತನ ಕೂಟ ಆಯೋಜಿಸಿದ್ದರು. ಇದನ್ನು ಬಿಜೆಪಿ ಭಿನ್ನಮತ, ನಾಯಕತ್ವ ಬದಲಾವಣೆಗೆ ಶಾಸಕರ ಯತ್ನ ಎಂದೇ ವಿಶ್ಲೇಷಣೆ ಮಾಡಲಾಗಿತ್ತು. ಔತನಕೂಟ ಆಯೋಜಿಸಿದ್ದ ಉಮೇಶ್ ಕತ್ತಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರೂ ಕೂಡ ಸಿಎಂ ವಿರುದ್ಧ ಶಾಸಕರು ಸಭೆ ನಡೆಸಿದ್ದಾರೆ ಎಂದೇ ಹೇಳಲಾಗಿತ್ತು. ಈ ವೇಳೆ ಮೈಸೂರು ಪ್ರವಾಸದಲ್ಲಿದ್ದ ರಮೇಶ್ ಜಾರಕಿಹೊಳಿ ಹೈಕಮಾಂಡ್ ಒಪ್ಪಿದ್ರೆ ಮತ್ತೆ ಆಪರೇಷನ್ ಕಮಲ ಆರಂಭಿಸುವ ಸ್ಫೋಟಕ ಹೇಳಿಕೆ ನೀಡುವ ಜೊತೆಗೆ ಸಿಎಂ ಬೆನ್ನಿಗೆ ನಿಂತರು. ಈ ಕಾರಣಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪನವರು ಸಚಿವ ರಮೇಶ್ ಜಾರಕಿಹೊಳಿಗೆ ಬೆಳಗಾವಿ ಉಸ್ತುವಾರಿ ವಹಿಸಿದ್ದಾರೆ ಎಂದು ಹೇಳಲಾಗ್ತಿದೆ.