ಚಿಕ್ಕೋಡಿ : ಸಚಿವ ಸ್ಥಾನ ಕಳೆದುಕೊಂಡು ಹಲವು ದಿನಗಳ ಕಾಲ ಸೈಲೆಂಟ್ ಆಗಿದ್ದ ಗೋಕಾಕ್ ಸಾಹುಕಾರ್ ಇದೀಗ ವಿಧಾನ ಪರಿಷತ್ ಚುನಾವಣೆಯಲ್ಲಿ ಫುಲ್ ಆ್ಯಕ್ಟೀವ್ ಆದಂತಿದೆ. ತಮ್ಮ ರಾಜಕೀಯ ಬದ್ಧ ವೈರಿ ಲಕ್ಷ್ಮಿ ಹೆಬ್ಬಾಳ್ಕರ್ ಸೋದರನನ್ನು ಸೋಲಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತರಾಗಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ ಅಮೋಘ ಗೆಲುವು ಸಾಧಿಸಿದ್ದ ಪಕ್ಷೇತರ ಎಂಎಲ್‌ಸಿ ಆಗಿದ್ದ ವಿವೇಕರಾವ್ ಪಾಟೀಲ್( Vivekrao patil) ಅವರನ್ನು ಭೇಟಿಯಾಗಿ ರಮೇಶ್ ಜಾರಕಿಹೊಳಿ ಭೇಟಿಯಾಗಿ ಮಾತುಕತೆ ನಡೆಸಿದರು.
ಇಂದು ಬೆಕ್ಕೇರಿ ಗ್ರಾಮದಲ್ಲಿರುವ ವಿವೇಕರಾವ್ ಪಾಟೀಲ್ ಮನೆಗೆ ತೆರಳಿ ಬಿಜೆಪಿಗೆ ಬರುವಂತೆ ರಮೇಶ್ ಜಾರಕಿಹೊಳಿ(Ramesh Jarkiholi) ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ಅಭ್ಯರ್ಥಿ ಗೆಲ್ಲಿಸೋದು.. ಚನ್ನರಾಜ ಹಟ್ಟಿಹೊಳಿ ಸೋಲಿಸೋದು : ಡಿ.10ರಂದು ಬೆಳಗಾವಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್‌ನ ಎರಡು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಈಗಾಗಲೇ ಬಿಜೆಪಿಯಿಂದ ಅಧಿಕೃತವಾಗಿ ಮಹಾಂತೇಶ ಕವಟಗಿಮಠ ಅವರಿಗೆ ಟಿಕೆಟ್ ಪಕ್ಕಾ ಆಗಿದೆ.
ಮತ್ತೊಂದು ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಕಣಕ್ಕಿಳಿಸಲು ಸಾಹುಕಾರ್ ಬಿಗ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದ್ರೆ, ಲಖನ್ ಜಾರಕಿಹೊಳಿ(lakhan jarkiholi) ಸ್ಪರ್ಧೆ ಬಗ್ಗೆ ಶಾಸಕ ರಮೇಶ್ ಜಾರಕಿಹೊಳಿ ಈವರೆಗೂ ಗುಟ್ಟು ಬಿಟ್ಟುಕೊಡುತ್ತಿಲ್ಲದಿದ್ದರೂ ಸಹೋದರನ ಪರವಾಗಿ ಈಗಾಗಲೇ ಒಂದು ಹಂತದ ಪ್ರಚಾರ ಕಾರ್ಯ ಮುಗಿಸಿದ್ದಾರೆ.
ಇತ್ತ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ವಿವೇಕರಾವ್ ಪಾಟೀಲ್ ಇದೀಗ ಮರಳಿ ಮತ್ತೆ ಕಾಂಗ್ರೆಸ್ನಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರು. ಆದ್ರೆ, ವಿವೇಕರಾವ್ ಪಾಟೀಲ್‌ಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆ ಸದ್ದಿಲ್ಲದೇ ಗೋಕಾಕ್ ಶಾಸಕ ವಿವೇಕರಾವ್ ಪಾಟೀಲ್ ಅವರನ್ನು ಬಿಜೆಪಿಗೆ ಸೆಳೆಯುವ ಮೂಲಕ ಸಹೋದರನನ್ನು ಗೆಲ್ಲಿಸಿಕೊಂಡು ಬರಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
ಇದನ್ನೂ ಓದಿ:ಜಾರಕಿಹೊಳಿ ಸಹೋದರರ ಕನಸಿಗೆ ಬಿಜೆಪಿ ಹೈಕಮಾಂಡ್ ಎಳ್ಳು ನೀರು: ಪಕ್ಷೇತರ ಅಭ್ಯರ್ಥಿ ಆಗ್ತಾರಾ 'ಲಖನ್'..!
ವಿವೇಕರಾವ್ ಪಾಟೀಲ ಜೊತೆಗೆ ವಿಧಾನ ಪರಿಷತ್ ಚುನಾವಣೆ ಸಂಬಂಧ ಮಹತ್ವದ ಮಾತುಕತೆ ನಡೆಸಲಾಗುತ್ತಿದೆ. ಇತ್ತ ಕಳೆದ ಬಾರಿ ಎಂಎಲ್‌ಸಿ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ್ದ ವಿವೇಕರಾವ್ ಪಾಟೀಲ್ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ.
ಒಂದು ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸದೇ ಇದ್ರೆ ಸಹೋದರ ಲಖನ್‌ಗೆ ಬೆಂಬಲಿಸುವಂತೆ ವಿವೇಕರಾವ್ ಪಾಟೀಲಗೆ ರಮೇಶ್ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಭಾನುವಾರ ಬೆಂಬಲಿಗರನ್ನು ಸೇರಿಸು, ಮತ್ತೊಮ್ಮೆ ಭೇಟಿಯಾಗುವೆ ಅಂತಾ ವಿವೇಕರಾವ್ ಪಾಟೀಲ್‌ಗೆ ರಮೇಶ್ ಜಾರಕಿಹೊಳಿ ತಿಳಿಸಿದ್ದಾರಂತೆ.
ಬಿಜೆಪಿ ಸೇರ್ಪಡೆಗೆ ವಿವೇಕರಾವ್ ಪಾಟೀಲ್‌ಗೆ ರಮೇಶ್ ಜಾರಕಿಹೊಳಿ ಆಹ್ವಾನ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿರುವ ವಿವೇಕರಾವ್ ಪಾಟೀಲ್ ಮನೆಗೆ ಭೇಟಿ ನೀಡಿದ ಶಾಸಕ ರಮೇಶ ಜಾರಕಿಹೊಳಿ, ಬಿಜೆಪಿ ಸೇರ್ಪಡೆಗೆ ಆಹ್ವಾನ ನೀಡಿದ್ದಾರಂತೆ. ಇದಲ್ಲದೇ ಕಾಂಗ್ರೆಸ್ ಪಕ್ಷದಲ್ಲಿರುವ ತಮ್ಮ ಆಪ್ತರ ಮನೆಗೆ ಭೇಟಿ ನೀಡುತ್ತಿರುವ ರಮೇಶ್ ಜಾರಕಿಹೊಳಿ, ಮೊನ್ನೆಯಷ್ಟೇ ಮಾಜಿ ಶಾಸಕ ರಾಜು ಕಾಗೆ ಭೇಟಿ ಮಾಡಿದ್ದರು.
ರಾಜು ಕಾಗೆಯನ್ನು ಮರಳಿ ಬಿಜೆಪಿಗೆ ತರಲು ಸಹ ರಮೇಶ್ ಜಾರಕಿಹೊಳಿ ಯತ್ನ ನಡೆಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಎರಡು ಸ್ಥಾನಗಳ ಪೈಕಿ ಒಂದು ಮತ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠಗೆ ನೀಡಿ. ಇನ್ನೊಂದು ಮತ ಕಾಂಗ್ರೆಸ್ ಸೋಲಿಸುವ ಅಭ್ಯರ್ಥಿಗೆ ನೀಡಬೇಕೆಂದು ನಿನ್ನೆ ಗೋಕಾಕ್‌ನಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರಿಗೆ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.