ಬೆಳಗಾವಿ: ನಗರದ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯ, ಮಲಪ್ರಭಾ ವಲಯ ಧಾರವಾಡದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಬಳ್ಳಾರಿ ನಾಲಾ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಚಿವರು ಸೂಚನೆ ನೀಡಿದರು. ಇತ್ತೀಚಿನ ಪ್ರವಾಹ ಮತ್ತು ನೆರೆ ಹಾವಳಿಯಿಂದ ಬಳ್ಳಾರಿ ನಾಲಾದಿಂದ ತೀವ್ರ ಹಾನಿ ಸಂಭವಿಸಿದೆ. ಆದ್ದರಿಂದ ಈ ಯೋಜನೆಯಲ್ಲಿ ಇರಬಹುದಾದ ಲೋಪದೋಷಗಳ ಬಗ್ಗೆ ಮರುಪರಿಶೀಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಜಲಾಶಯಗಳ ಸುರಕ್ಷತೆ ದೃಷ್ಟಿಯಿಂದ ತುರ್ತು ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವುದು ಅನಿವಾರ್ಯವಾಗುತ್ತದೆ. ಜನರಿಗೆ ತೊಂದರೆಯಾಗದಂತೆ ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಜಂಟಿ ಸಭೆ ಆಯೋಜಿಸಲು ಸೂಚನೆ:
ಅರಣ್ಯ ಪ್ರದೇಶಗಳಲ್ಲಿ ನೀರಾವರಿ ಯೋಜನೆಗಳಿಗೆ ತೊಡಕಾಗುತ್ತಿರುವ ವಿಷಯಗಳ ಬಗ್ಗೆ ಚರ್ಚಿಸಲು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ವಿಸ್ತೃತವಾಗಿ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಲು ಜಂಟಿ ಸಭೆಯನ್ನು ಆಯೋಜಿಸುವಂತೆ ಸಚಿವ ರಮೇಶ್ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದೇ ರೀತಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಕೂಡ ಪ್ರತ್ಯೇಕ ಸಭೆ ನಡೆಸುವಂತೆ ತಿಳಿಸಿದರು.
ಭೂ ಸ್ವಾಧೀನ ಕಚೇರಿ ಸ್ಥಳಾಂತರಕ್ಕೆ ನಿರ್ದೇಶನ:
ಸದ್ಯಕ್ಕೆ ಜಿಲ್ಲೆಯಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಗತ್ಯವಿರುವ ವಿಶೇಷ ಭೂ ಸ್ವಾಧೀನ ಅಧಿಕಾರಿಗಳ ಕಚೇರಿಯ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಸಚಿವ ರಮೇಶ್ ಜಾರಕಿಹೊಳಿ ಅಧಿಕಾರಿಗಳಿಗೆ ತಿಳಿಸಿದರು. ಸತ್ತಿಗೇರಿ ಏತ ನೀರಾವರಿ ಯೋಜನೆ ಕುರಿತು ಪ್ರಸ್ತಾಪಿಸಿದ ಶಾಸಕ ಆನಂದ ಮಾಮನಿ, ಯೋಜನೆಗೆ ಅಗತ್ಯವಿರುವ 1.90 ಟಿಎಂಸಿ ನೀರನ್ನು ಕುಡಿಯಲು ಮತ್ತು ನೀರಾವರಿಗೆ ಹಂಚಿಕೆ ಮಾಡಲಾಗಿರುವ ನೀರಿನ ಪ್ರಮಾಣದಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಂಡು ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಬಹುದು. ಈ ಬಗ್ಗೆ ಸೂಕ್ತ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯ ಯೋಜನೆಗಳ ಕಾಮಗಾರಿ ಕ್ಷಿಪ್ರಗತಿಯಲ್ಲಿ ಸಾಗಬೇಕು. ಪ್ರಸ್ತುತ ಸರ್ಕಾರ ಅನುಮೋದನೆ ನೀಡಿರುವ ಯೋಜನೆಗಳಿಗೆ ನೀರು ಹಂಚಿಕೆಯ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ಗುತ್ತಿಗೆದಾರರಿಂದ ಅಧಿಕಾರಿಗಳು ದೂರವಿದ್ದು, ಜನರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಗುತ್ತಿಗೆದಾರರೊಂದಿಗೆ ಶಾಮೀಲಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವ ಜಾರಕಿಹೊಳಿ ಎಚ್ಚರಿಕೆ ನೀಡಿದರು.