ಬೆಳಗಾವಿ : ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಹಾಗೂ ಉಮೇಶ್ ಕತ್ತಿ ಅವರ ನಿರ್ಣಯಕ್ಕೆ ಬದ್ಧವಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾತನಾಡಿ, ಡಿಸಿಸಿ ಬ್ಯಾಂಕ್ ಚುನಾವಣೆ ಪಕ್ಷಾತೀತವಾಗಿ ನಡೆಯಲಿದೆ. ಡಿಸಿಸಿ ಬ್ಯಾಂಕ್ ಯಾವ ಪಕ್ಷಕ್ಕೂ ಸೀಮಿತವಲ್ಲ. ಅದು ಸಹಕಾರ ರಂಗದಲ್ಲಿರುವ ಬ್ಯಾಂಕ್. ಹೀಗಾಗಿ ಜಿಲ್ಲೆ, ತಾಲೂಕಿನಲ್ಲಿರುವ ರೈತರು, ಸಂಬಂಧಿಸಿದ ನಾಯಕರು ಹಾಗೂ ಬಾಲಚಂದ್ರ ಜಾರಕಿಹೊಳಿ ಮತ್ತು ಉಮೇಶ್ ಕತ್ತಿ ಅವರ ನಿರ್ಣಯವೇ ಅಂತಿಮ ಎಂದರು.
ಕಳೆದ ವರ್ಷದಲ್ಲಿ ಆಗಿರುವ ಬೆಳೆ ಹಾನಿ ಪರಿಹಾರ ಬಿಡುಗಡೆ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮಕೈಗೊಳ್ಳಲಾಗುವುದು. ಜೊತೆಗೆ 2019 ರಲ್ಲಿ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೂ ಹಾಗೂ ಈ ವರ್ಷ ಆಗಿರುವ ಮಳೆ ಹಾನಿಯ ಕುರಿತು ಸಭೆಯಲ್ಲಿ ಚರ್ಚಿಸಿ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು. ಮಳೆ ಹಾನಿಯ ಸಮೀಕ್ಷೆ ಮಾಡಲು ಈಗಾಗಲೇ ತಿಳಿಸಿದ್ದೇನೆ. ಬೆಳೆ ಹಾನಿ ಸರ್ವೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.
ಮಹಾನಗರ ಪಾಲಿಕೆ ಚುನಾವಣೆಗೆ ಕುರಿತಂತೆ ಮಾತನಾಡಿ, ವಾರ್ಡ್ ವಿಂಗಡಣೆ ವಿಷಯವಾಗಿ ಕೋರ್ಟ್ನಲ್ಲಿ ಪ್ರಕರಣ ಇರುವುದರಿಂದ ವಿಳಂಬವಾಗಿದೆ. ಆ ಕುರಿತು ಇನ್ನೂ ಸರಿಯಾದ ಮಾಹಿತಿ ಇಲ್ಲ. ಶೀಘ್ರದಲ್ಲೇ ಚುನಾವಣೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಆರ್.ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪ್ರಕರಣದ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಡಿ.ಕೆ ಶಿವಕುಮಾರ್ ಹತಾಶೆಯಿಂದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಗೋಕಾಕ್ ಉಪಚುನಾವಣೆ ವೇಳೆ ಮುಖ್ಯಮಂತ್ರಿಗಳ ಮೇಲೆಯೇ ಕೇಸ್ ದಾಖಲಿಸಿದ್ದರು. ಪಕ್ಷಗಳು ನಿಯಮ ಉಲ್ಲಂಘಿಸಿದರೆ ಕ್ರಮಕೈಗೊಳ್ಳಲು ಚುನಾವಣೆ ಆಯೋಗ ಸ್ವತಂತ್ರವಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸಣ್ಣ ವಿಷಯವನ್ನು ದೊಡ್ಡದು ಮಾಡುತ್ತಿದೆ ಎಂದು ಹೇಳಿದರು.
ಸಂಪುಟ ವಿಸ್ತರಣೆ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರು ಯಾವಾಗ ಬೇಕಾದರೂ ನಿರ್ಣಯ ತೆಗೆದುಕೊಳ್ಳಬಹುದು. ಉಪಚುನಾವಣೆ ಬಳಿಕ ಸಂಪುಟ ವಿಸ್ತರಣೆ ನಿರ್ಧಾರ ಕೈಗೊಳ್ಳಲಿದ್ದಾರೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ ಎಂದು ತಿಳಿಸಿದರು.