ಬೆಳಗಾವಿ : ಎಪಿಎಂಸಿ ಗದ್ದುಗೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಶಿಷ್ಯನನ್ನು ಏರಿಸಿದ್ದೇ ನಾನು ಎಂದು ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಎಪಿಎಂಸಿಗೆ ಯುವರಾಜ ಕದಂ ಆಯ್ಕೆಯಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ ಎಂಬ ಹೆಬ್ಬಾಳ್ಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ಯುವರಾಜ್ ಕದಂ ಅವರನ್ನು ಎಪಿಎಂಸಿ ಗದ್ದುಗೆಗೆ ಏರಿಸಿದ್ದೇ ನಾನು, ಇದರ ಲಾಭ ಮುಂದೆ ನಮಗಾಗಲಿದೆ ಎಂದು ಅಚ್ಛರಿಯ ಹೇಳಿಕೆ ನೀಡಿದರು. ಗ್ರಾಮೀಣ ಕ್ಷೇತ್ರದಲ್ಲಿ ಭಾಷಾ ರಾಜಕಾರಣ ನಡೆಯಲ್ಲ ಎಂದಿರುವ ಹೆಬ್ಬಾಳ್ಕರ್, ಇತಿಹಾಸ ಗಮನಿಸಬೇಕು. ಈ ಹಿಂದೆಯೂ ಇಲ್ಲಿ ಭಾಷಾ ರಾಜಕಾರಣ ನಡೆಯುತ್ತ ಬಂದಿದೆ ಎಂದರು.
ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ಎಂಎಲ್ಸಿ ಆಗಿದ್ದಾರೆ. ಸಂಪುಟ ಸೇರ್ತಾರೋ ಇಲ್ಲವೋ ಎಂಬುವುದನ್ನು ಹೈಕಮಾಂಡ್ ನಿರ್ಣಯಿಸಲಿದೆ. ಎಚ್.ವಿಶ್ವನಾಥ್ ಅವರಿಗೆ ಸ್ಥಾನಮಾನ ನೀಡುವ ಬಗ್ಗೆಯೂ ನಮ್ಮ ನಾಯಕರು ಕ್ರಮ ವಹಿಸಲಿದ್ದಾರೆ. ಉಮೇಶ್ ಕತ್ತಿ ಸಂಪುಟ ಸೇರ್ಪಡೆ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದರು.
ತೈಲ ಬೆಲೆ ಏರಿಕೆ ಸಂಬಂಧ ಕಾಂಗ್ರೆಸ್ ಇಂದು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪ್ರತಿ ಪಕ್ಷದವರು ತಮ್ಮ ಕೆಲಸ ಮಾಡುತ್ತಿದ್ದಾರೆ ಮಾಡಲಿ. ಕಾಂಗ್ರೆಸ್ ನಾಯಕರು ಇಷ್ಟು ದಿನ ಏನು ಮಾಡಿದ್ದಾರೆ ಎಂಬುವುದು ದೇಶಕ್ಕೆ ಗೊತ್ತಿದೆ ಎಂದು ಹೇಳಿದರು.