ಬೆಳಗಾವಿ: ಹರಾಮಿ ದುಡ್ಡು ಹೊಂದಿರುವ ಬೆಳಗಾವಿ ಗ್ರಾಮೀಣ ಶಾಸಕಿ ಸೊಕ್ಕಿನಿಂದ ಮೆರೆಯುತ್ತಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೆಬ್ಬಾಳ್ಕರ್ ವಿರುದ್ಧ ಮತ್ತೆ ಗುಡುಗಿದ್ದಾರೆ.
ಬೆಳಗಾವಿಯ ವಿಜಯ ನಗರದಲ್ಲಿ ಬೆಳಗಾವಿ ಗ್ರಾಮೀಣ ಬಿಜೆಪಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಭಾಷಣದುದ್ದಕ್ಕೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರಿಗೆ ಹಣದ ಸೊಕ್ಕು ಬಹಳಷ್ಟಿದೆ. ಹಣ ತೂರಲು ನಾನೂ ಸಿದ್ಧನಿದ್ದೇನೆ. ಹಿಂದಿನ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟ ಕುಕ್ಕರ್ ಸ್ಟಾರ್ಟ್ ಇದೆಯೋ ಬಂದ್ ಇದೆಯೋ? ಗೊತ್ತಿಲ್ಲ. ಆದ್ರೆ ಆ ಕುಕ್ಕರ್ ಖರೀದಿಗೆ ಹಣ ಕೊಟ್ಟಿದ್ದು ನಾನೆ. ಹೆಬ್ಬಾಳ್ಕರ್ ಕುಕ್ಕರ್ ಹಂಚಿದ್ದು ನನ್ನ ದುಡ್ಡಲ್ಲಿ, ಅವಳ ದುಡ್ಡಲ್ಲ ಎಂದು ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದರು.
ಗ್ರಾಮೀಣ ಕ್ಷೇತ್ರದಲ್ಲಿ ದುಡ್ಡಿನ ಆಮಿಷಕ್ಕೆ ಯಾರೂ ಬಲಿಯಾಗಬಾರದು. ನಾನು ನಿಮ್ಮ ಜೊತೆಗಿರುತ್ತೇನೆ. 2023ರ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಬೇಕಿದೆ. ಮುಂಬರುವ ಡಿಸಿಸಿ ಬ್ಯಾಂಕ್, ಜಿ.ಪಂ., ಗ್ರಾ.ಪಂ. ಎಲೆಕ್ಷನ್‌ಗೆ ಗಟ್ಟಿಯಾಗಿ ನಿಲ್ಲಬೇಕು. ಈಗಾಗಲೇ ಡಿಸಿಸಿ ಬ್ಯಾಂಕ್ ಚುನಾವಣೆಗೆ ಕ್ಯಾಂಡಿಡೇಟ್ ಗಳು ದುಡ್ಡು ಹಂಚುತ್ತಿದ್ದಾರೆಂಬ ಮಾಹಿತಿ ಇದೆ. ಅವರು ಎಷ್ಟು ಕೊಡ್ತಾರೋ ಅದಕ್ಕೆ ಡಬಲ್ ದುಡ್ಡು ಕೊಡಲು ಸಿದ್ಧರಿದ್ದೇವೆ. ಸೊಕ್ಕಿನಿಂದ ನಾನು ಮಾತನಾಡುತ್ತಿಲ್ಲ. ನಮ್ಮದು ಬೆವರು ಸುರಿಸಿ ದುಡಿದ ದುಡ್ಡು. ಅವರ ರೀತಿ ಹರಾಮಿ ದುಡ್ಡಿಲ್ಲ, ಸಾಲ ಮಾಡಿಯಾದರೂ ದುಡ್ಡು ಕೊಡ್ತೀನಿ ಎಂದು ಹೆಬ್ಬಾಳ್ಕರ್ ಅವರಿಗೆ ಟಾಂಗ್ ನೀಡಿದ್ದಾರೆ.