ಬೆಳಗಾವಿ : ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ರಸಗೊಬ್ಬರದ ಕೊರತೆ ಆಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಅಗತ್ಯಬಿದ್ದರೆ ಹೆಚ್ಚುವರಿ ರಸಗೊಬ್ಬರ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಗೊಬ್ಬರ ಕೊರತೆಯಾಗಿದೆ ಎಂಬ ದೂರುಗಳು ಬರುತ್ತಿರುವ ಹಿನ್ನೆಲೆ ನಗರದ ಪ್ರವಾಸಿಮಂದಿರದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಇರುವ ದಾಸ್ತಾನು ರೈತರಿಗೆ ಸಮರ್ಪಕವಾಗಿ ವಿತರಿಸಬೇಕು. ಒಂದು ವೇಳೆ ಜಿಲ್ಲೆಗೆ ಇನ್ನೂ ಹೆಚ್ಚಿನ ಪ್ರಮಾಣದ ರಸ ಗೊಬ್ಬರ ಪೂರೈಸಲು ಕೇಂದ್ರ ಸಚಿವರಿಗೆ ಪತ್ರ ಬರೆಯಲಾಗುವುದು. ಜೊತೆಗೆ, ಖುದ್ದಾಗಿ ಮಾತನಾಡುವುದಾಗಿ ತಿಳಿಸಿದರು.
ಬೀಜ ವಿತರಣೆ, ಮಳೆಯ ಪ್ರಮಾಣ ಹಾಗೂ ಬಿತ್ತನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಚಿವರು, ಯಾವುದೇ ರೀತಿಯ ಸಮಸ್ಯೆಗಳಿದ್ದರೆ ತಮ್ಮ ಗಮನಕ್ಕೆ ತಂದರೆ ಸರ್ಕಾರದ ಮಟ್ಟದಲ್ಲಿ ತಕ್ಷಣವೇ ಪರಿಹರಿಸಲಾಗುವುದು. ಹನಿ ನೀರಾವರಿ ಸೌಲಭ್ಯಗಳ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳುವ ಮೂಲಕ ರೈತರನ್ನು ಪಾಲುದಾರರಾಗಿಸಬೇಕು ಎಂದು ನಿರ್ದೇಶಿಸಿದರು.
ಇದೇ ವೇಳೆ ರಸಗೊಬ್ಬರದ ಲಭ್ಯತೆ ಕುರಿತು ಸಚಿವರಿಗೆ ಮಾಹಿತಿ ನೀಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಜಿಲ್ಲೆಗೆ ಈ ವರ್ಷ 63 ಸಾವಿರ ಟನ್ ಗೊಬ್ಬರ ಬಂದಿದೆ. 20 ಸಾವಿರ ಟನ್ ಕಳೆದ ವರ್ಷದ ದಾಸ್ತಾನು ಇತ್ತು. ಒಟ್ಟು 86 ಸಾವಿರ ಟನ್‌ಗಳಲ್ಲಿ ಈಗಾಗಲೇ 76 ಸಾವಿರ ಟನ್ ವಿತರಿಸಲಾಗಿದೆ. ಇನ್ನು, ಹತ್ತು ದಿನಗಳಲ್ಲಿ ಮತ್ತೆ ಹತ್ತು ಸಾವಿರ ಟನ್ ಗೊಬ್ಬರ ದಾಸ್ತಾನು ಬರಲಿದೆ. ಸೋಂಕು ಹರಡುತ್ತಿರುವ ಹಿನ್ನೆಲೆ ಜುವಾರಿ ಗೊಬ್ಬರ ಕೊರತೆಯಿದೆ. ಅದರ ಬದಲಾಗಿ ಇತರೆ ಗೊಬ್ಬರ ತರಿಸಲಾಗಿದೆ. ಗೋಕಾಕ್ ಮತ್ತು ಅಥಣಿ ಸೇರಿ ಕೊರತೆ ಇರುವ ತಾಲೂಕುಗಳಿಗೆ ಹೊಸ ದಾಸ್ತಾನು ಬಂದ ಬಳಿಕ ಕಳಿಸಲಾಗುತ್ತಿದೆ ಎಂದು ಮೊಖಾಶಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜೇಂದ್ರ ಕೆ ವಿ, ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ. ಹೆಚ್ ಡಿ ಕೋಳೇಕರ ಮತ್ತಿತರರು ಉಪಸ್ಥಿತರಿದ್ದರು.