ಚಿಕ್ಕೋಡಿ: ಬೆಳಗಾವಿಯ ಕೆಲ ಭಾಗಗಳ ಜಲಾನಯನ ಪ್ರದೇಶಗಳಲ್ಲಿ ಮಳೆಯ ಅಬ್ಬರ ತಗ್ಗಿದೆ. ದೂಧ್‌ಗಂಗಾ ನದಿ ಒಳಹರಿವಿನಲ್ಲಿ ನಿರಂತರ ಏರಿಕೆ ಕಂಡು ಬರುತ್ತಿದ್ದು, ಸದಲಗಾ ಹಾಗೂ ಬೋರಗಾಂವ ಗ್ರಾಮಗಳ ಮಧ್ಯೆ ಇರುವ ಸೇತುವೆ ಹಾಗೂ ಯಕ್ಸಂಬಾ ಮತ್ತು ದಾನವಾಡ ಗ್ರಾಮಗಳ ಮಧ್ಯೆ ಇರುವ ಸೇತುವೆ ದೂಧ್‌ಗಂಗಾ ನದಿ ನೀರಿನಲ್ಲಿ ಮುಳುಗಡೆಯಾಗಿದೆ.
ಮುಳುಗಡೆಯಾಗಿರುವ ಸೇತುವೆಗಳು:
ಕಲ್ಲೋಳ ಹಾಗೂ ಯಡೂರ ಗ್ರಾಮಗಳ ನಡುವಿನ ಸೇತುವೆ, ಮಲಿಕವಾಡ ಹಾಗೂ ದತ್ತವಾಡ ನಡುವಿನ ಸೇತುವೆ, ನಿಪ್ಪಾಣಿ ತಾಲೂಕಿನ ಗ್ರಾಮಗಳಾದ ಕಾರದಗಾಭೋಜ್ ಹಾಗೂ ಭೋಜ್‌ವಾಡಿ ನಡುವಿನ ಸೇತುವೆ ಜಲಾವೃಗೊಂಡಿವೆ. ಅಲ್ಲದೇ ಕನ್ನೂರ, ಜತ್ರಾಟ, ಭೀವಶಿ, ಅಕ್ಕೋಳ, ಸಿದ್ನಾಳ, ಮಾಂಗೂರ, ಕುನ್ನೂರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕೂಡ ಮುಳುಗಡೆಯಾಗಿದೆ.
ಜೊತೆಗೆ ರಾಯಭಾಗ ತಾಲೂಕಿನ ಕುಡಚಿ ಹಾಗೂ ಉಗಾರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮತ್ತು ಕಾಗವಾಡ ತಾಲೂಕಿನ ಉಗಾರ, ಉಗಾರ ಬಿಕೆ ಗ್ರಾಮಗಳ ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ. ಇನ್ನು ಹುಕ್ಕೇರಿ ತಾಲೂಕಿನ ಹೀರಣ್ಯಕೇಶಿ ನದಿ ಕೂಡಾ ಉಕ್ಕಿ ಹರಿಯುತ್ತಿದ್ದು, ಗೋಟುರು ಮತ್ತು ನಾಗನೂರ ಸೇತುವೆ ಮುಳುಗಡೆಯಾಗಿದೆ. ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಇದಾಗಿದ್ದು, ಜಲಾವೃತಗೊಂಡಿರುವ ಪರಿಣಾಮ ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಡಿತವಾಗಿದೆ. ಸಂಚಾರಕ್ಕೆ ಉಭಯ ರಾಜ್ಯದ ಜನತೆ ಪರದಾಡುವಂತಾಗಿದೆ. ಸೇತುವೆಗಳು ಜಲಾವೃತ ಸ್ಥಿತಿಯಲ್ಲಿಯೇ ಇದ್ದು, ಸಾರ್ವಜನಿಕರು ಸುತ್ತು ಬಳಸಿ ಯಾವ್ಯಾವುದೋ ಮಾರ್ಗಗಳ ಮೂಲಕ ಪ್ರಯಾಣಿಸಬೇಕಾದ ಅನಿವಾರ್ಯತೆ ಹಾಗೂ ಸಂಕಷ್ಟ ಎದುರಾಗಿದೆ.