ಬೆಂಗಳೂರು: ಬಿಜೆಪಿ ಶಾಸಕ ಆರ್.ಅಶೋಕ್ ಅವರನ್ನು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಸಭಾಧ್ಯಕ್ಷ ಯು.ಟಿ.ಖಾದರ್ ಮಾನ್ಯತೆ ನೀಡಿದ್ದಾರೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ವಿಧಾನಸಭೆ ಸದಸ್ಯ ಆರ್.ಅಶೋಕ್ ಅವರನ್ನು ನವೆಂಬರ್ 17, 2023ರಿಂದ ಜಾರಿಗೆ ಬರುವಂತೆ ವಿಪಕ್ಷದ ನಾಯಕರನ್ನಾಗಿ ಸ್ಪೀಕರ್ ಮಾನ್ಯತೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಅಶೋಕ್ ಅವರನ್ನು ಶುಕ್ರವಾರ ಬಿಜೆಪಿ ಶಾಸಕಾಂಗ ಸಭೆಯಲ್ಲಿ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಮೂರು ತಿಂಗಳ ಬಳಿಕ ಹೈಕಮಾಂಡ್ ಆಯ್ಕೆ ಮಾಡಿದೆ. ಈ ಸ್ಥಾನಕ್ಕೆ ಬಿಜೆಪಿಯಲ್ಲಿ ಸಾಕಷ್ಟು ಪೈಪೋಟಿ ಏರ್ಪಟ್ಟಿತ್ತು. ಬಸನಗೌಡ ಯತ್ನಾಳ್, ಅರವಿಂದ ಬೆಲ್ಲದ್, ಸುನಿಲ್ ಕುಮಾರ್ವಿ, ಅಶ್ವತ್ಥ್ ನಾರಾಯಣ ರೇಸ್ನಲ್ಲಿದ್ದರು. ಕೊನೆಗೆ ಆರ್.ಅಶೋಕ್ಗೆ ಹೈಕಮಾಂಡ್ ಮಣೆ ಹಾಕಿದೆ.
ಇದನ್ನೂ ಓದಿ: ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿಗೆ ಸಿಕ್ಕಿದ ಪ್ರತಿಪಕ್ಷ ಸ್ಥಾನ: ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಿನ್ನಲೆಯೇನು?
ಆರ್ ಅಶೋಕ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕನ ಪಟ್ಟ: ಪರಿಷತ್ ವಿಪಕ್ಷ ನಾಯಕನ ಆಯ್ಕೆ ಮುಂದೂಡಿಕೆ
ಕೇಂದ್ರದಿಂದ ಬಂದಿದ್ದ ವೀಕ್ಷಕರ ಸಮ್ಮುಖದಲ್ಲಿ ಶುಕ್ರವಾರ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕರನ್ನಾಗಿ ಪಕ್ಷದ ಹಿರಿಯ ಶಾಸಕ ಆರ್ ಅಶೋಕ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಆದ್ರೆ ಪರಿಷತ್ ವಿಪಕ್ಷ ನಾಯಕ ಆಯ್ಕೆ ಮುಂಡೂಲಾಗಿತ್ತು. ಶಾಸಕರ ಅಭಿಪ್ರಾಯ ಪಡೆದು ಕೇಂದ್ರದಿಂದ ವೀಕ್ಷಕರಾಗಿ ಬಂದಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಶೋಕ್ ಹೆಸರನ್ನು ಪ್ರಕಟಿಸಿದ್ದರು. ಬಳಿಕ ಆರ್ ಅಶೋಕ್ ಅವರಿಗೆ ಸನ್ಮಾನಿಸಲಾಗಿತ್ತು.
ಬಳಿಕ ಮಾತನಾಡಿದ ಆರ್ ಅಶೋಕ್, ಪ್ರತಿಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಡಿಸೆಂಬರ್ 4ರಿಂದ ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಅಷ್ಟರಲ್ಲಿ ಪರಿಷತ್ ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ಕೂಡ ನಡೆಯಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾಹಿತಿ ನೀಡಿದ್ದರು.
ಆರ್ ಅಶೋಕ್ ಅವರು ಏಳು ಬಾರಿ ಬಿಜೆಪಿ ಶಾಸಕ ಮತ್ತು ಜುಲೈ 2012ರಿಂದ ಮೇ 2013 ರವರೆಗೆ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. ಸಚಿವರಾಗಿ ಗೃಹ, ಕಂದಾಯ, ಪೌರಾಡಳಿತ, ಸಾರಿಗೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮುಂತಾದ ವಿವಿಧ ಖಾತೆಗಳನ್ನು ನಿರ್ವಹಿಸಿದ್ದಾರೆ. ರಾಜಧಾನಿ ಬೆಂಗಳೂರಿಗೆ ಈವರೆಗೆ ಮುಖ್ಯಮಂತ್ರಿ ಸ್ಥಾನ ಅಥವಾ ಪ್ರತಿಪಕ್ಷದ ನಾಯಕರ ಸ್ಥಾನ ಸಿಕ್ಕಿರಲಿಲ್ಲ. ಆದರೆ ಮೊದಲ ಬಾರಿ ಬೆಂಗಳೂರಿನ ಶಾಸಕರಿಗೆ ಪ್ರತಿಪಕ್ಷದ ನಾಯಕ ಸ್ಥಾನ ದೊರೆತಂತಾಗಿದೆ.