ಬೆಳಗಾವಿ: ರೈತರ ಕಬ್ಬಿನ ಬಾಕಿ ಬಿಲ್ ಬಿಡುಗಡೆಗೆ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಸವದತ್ತಿ ತಾಲೂಕು ಹೊಸೂರು ಗ್ರಾಮದ ಮಡಿವಾಳೇಶ್ವರ ಆತ್ಮ ಕಬ್ಬು ಬೆಳಗಾರರ ಸಂಘದ ನೂರಾರು ರೈತರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡ ರೈತರು, ಕಳೆದ ವರ್ಷ ಕಬ್ಬು ಪೂರೈಸಿದ ರೈತರಿಗೆ ಸಕ್ಕರೆ ಕಾರ್ಖಾನೆಗಳು ಎರಡನೇ ಕಂತಿನ ಬಿಲ್ ಸಂದಾಯ ಮಾಡಿಲ್ಲ. ಕೇಳಿದ್ರೆ ಕೋವಿಡ್ ಸೋಂಕು ಬಂದ ಕಾರಣ ತಡವಾಗಿದೆ ಎಂದು ಕಾರ್ಖಾನೆ ಮಾಲೀಕರು ನೆಪ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಕೊರೊನಾ ಕಾರಣಕ್ಕಾಗಿ ಕಬ್ಬು ಬೆಳೆಗಾರರ ಬಾಕಿ ಬಿಲ್ಗೆ ತಡೆ ನೀಡಿದ್ದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಮುನವಳ್ಳಿಯ ರೇಣುಕಾ ಸಕ್ಕರೆ ಕಾರ್ಖಾನೆ, ಕರೀಕಟ್ಟಿಯ ಹರ್ಷ ಶುಗರ್ಸ್, ಸಿದ್ಧಸಮುದ್ರದ ಸೋಮೇಶ್ವರ ಸಕ್ಕರೆ ಕಾರ್ಖಾನೆಯವರು ಕಬ್ಬು ಪೂರೈಸಿದ ರೈತರಿಗೆ ಬಾಕಿ ಬಿಲ್ ಪಾವತಿಸಿಲ್ಲ. ಹೀಗಾಗಿ ರೈತರು ಪರದಾಡುತ್ತಿದ್ದಾರೆ. ಸರ್ಕಾರ ಈ ಕೂಡಲೇ ರೈತರ ಕಬ್ಬಿನ ಬಾಕಿ ಬಿಲ್ ವಿತರಿಸಲು ಕ್ರಮ ಕೈಗೊಳ್ಳಲು ಸಕ್ಕರೆ ಕಾರ್ಖಾನೆಗಳಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.