ಬೆಳಗಾವಿ: ಸ್ಮಶಾನಕ್ಕೆ ಹೋಗಲು ಸಮರ್ಪಕ ರಸ್ತೆ ಇಲ್ಲದ ಕಾರಣ ಸಂಬಂಧಿಕರು ಶವ ಮನೆಯಲ್ಲೇ ಇಟ್ಟುಕೊಂಡು ಜಿಲ್ಲಾಡಳಿತ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಕುಟುಂಬಸ್ಥರಿಗೆ ಗ್ರಾಮಸ್ಥರು ಕೂಡ ಸಾಥ್ ನೀಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕ ಏಣಗಿ ಗ್ರಾಮದಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ. ಹಸ್ಮತ್ ದುಪದಾಳ ಎಂಬುವವರು ಬುಧವಾರ ಮಧ್ಯಾಹ್ನ 12 ಕ್ಕೆ ಮೃತಪಟ್ಟಿದ್ದಾರೆ. ಸ್ಮಶಾನಕ್ಕೆ ಹೋಗಲು ರಸ್ತೆಯಿಲ್ಲದೇ ಸಂಬಂಧಿಕರು ಹಸ್ಮತ್ ಅವರ ಶವವನ್ನು ಕಳೆದ 10 ಗಂಟೆಗಳಿಂದ ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಆ ಮೂಲಕ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಗ್ರಾಮದಲ್ಲಿರುವ ಹಿಂದೂ-ಮುಸ್ಮಿಂ ಸ್ಮಶಾನಕ್ಕೆ ಶವ ಒಯ್ಯಲು ಸಮರ್ಪಕ ರಸ್ತೆಯಿಲ್ಲ. ಅಂತ್ಯಸಂಸ್ಕಾರಕ್ಕೆ ಹೋಗಲು ಜನರು ಪರದಾಡುವ ಸ್ಥಿತಿ ಇಲ್ಲಿದೆ. ರಸ್ತೆ ನಿರ್ಮಾಣ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರಸ್ತೆ ನಿರ್ಮಿಸದ ತಾಲೂಕು ಆಡಳಿತ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.