ಗೋಕಾಕ್: ರಾಜ್ಯದಲ್ಲಿ ಜಾರಕಿಹೊಳಿ ಪ್ರತಿಷ್ಠಿತ ಕುಟುಂಬವಾಗಿದ್ದು, ಇಬ್ಬರೂ ಅಭ್ಯರ್ಥಿಗಳು ನಮ್ಮ ಭಕ್ತರೇ ಆಗಿದ್ದಾರೆ. ಇಲ್ಲಿ ಯಾರೊಬ್ಬರ ಪರ ವಹಿಸೋದು ಕಷ್ಟ. ಇವರಲ್ಲಿ ಯಾರನ್ನು ಗೆಲ್ಲಿಸಿದ್ರೆ ಅನುಕೂಲ ಆಗಲಿದೆ ಎಂಬುದು ನನಗಿಂತ ಕ್ಷೇತ್ರದ ಜನರಿಗೆ ಗೊತ್ತಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ಗೋಕಾಕ್ ಕ್ಷೇತ್ರದ ಉಪಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ ಪೈಪೋಟಿ ವಿಚಾರವಾಗಿ ಅರಭಾವಿ ಪ್ರವಾಸ ಮಂದಿರದಲ್ಲಿ ಪ್ರತಿಕ್ರಿಯಿಸಿ, ರಮೇಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ ಇಬ್ಬರೂ ನಮ್ಮ ಭಕ್ತರೇ ಆಗಿದ್ದಾರೆ. ಇಲ್ಲಿ ಒಬ್ಬರ ಪರ ವಹಿಸೋದು ಕಷ್ಟ ಎಂದರು.
ಇಬ್ಬರೂ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುವುದರ ಬಗ್ಗೆ ನನಗೆ ವೈಯಕ್ತಿಕವಾಗಿ ಬೇಜಾರಿದೆ. ಜಾರಕಿಹೊಳಿ ಕುಟುಂಬಕ್ಕೆ ಸಮುದಾಯದಲ್ಲಿ ಒಳ್ಳೆಯ ಹೆಸರಿದ್ದು, ಯಾವುದೇ ಪಕ್ಷದಿಂದ ಸ್ಪರ್ಧಿಸಿ, ಆದರೆ ವೈಯಕ್ತಿಕ ತೇಜೋವಧೆ ಮಾಡಬೇಡಿ ಎಂದು ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿಗೆ ಸ್ವಾಮೀಜಿ ಕಿವಿಮಾತು ಹೇಳಿದರು.
ಜಾರಕಿಹೊಳಿ ಕುಟುಂಬದಿಂದ ಓರ್ವ ವ್ಯಕ್ತಿ ಸಿಎಂ ಆಗಬೇಕು ಎನ್ನುವುದು ನಮ್ಮ ಬಯಕೆಯಾಗಿದ್ದು, ಆ ಶಕ್ತಿ ಜಾರಕಿಹೊಳಿ ಕುಟುಂಬಕ್ಕೆ ಇದೆ. ಅವಕಾಶ ಸಿಕ್ಕಾಗ ರಾಜ್ಯದ ಮುಖ್ಯಮಂತ್ರಿಯಾಗಿ ನಾಡಿನ ಜನರ ಸೇವೆ ಮಾಡಿ ಎಂದು ಜಾರಕಿಹೊಳಿ ಕುಟುಂಬಕ್ಕೆ ಆಶೀರ್ವಾದ ಮಾಡಿದರು. ಜಾರಕಿಹೊಳಿ ಸಹೋದರ ನಡುವೆ ಸಂಧಾನ ವಿಚಾರವಾಗಿ 2, 3 ವರ್ಷಗಳ ಹಿಂದೆ ವೈಯಕ್ತಿಕ ತೇಜೋವಧೆ ಕೈಬಿಡಬೇಕು ಎಂದು ಹೇಳಿದ್ದೆ, ಮತ್ತೆ ಭೇಟಿ ಮಾಡಿದ ಸಂದರ್ಭದಲ್ಲಿ ಮಾತುಕತೆ ಮಾಡುತ್ತೇನೆ ಎಂದರು.