ಚಿಕ್ಕೋಡಿ: ಜಿಲ್ಲೆಯ ಗಡಿ ಭಾಗದಲ್ಲಿ ವರುಣ ಕೃಪೆ ತೋರಿರುವುದರಿಂದ ಸಂತಸಗೊಂಡಿದ್ದ ರೈತರು, ಕೃಷಿ ಇಲಾಖೆ ನೀಡಿದ್ದ ಸೋಯಾಬೀನ್ ಬೀಜಗಳನ್ನು ಬಿತ್ತಿದ್ದರೂ ಅವು ಮೊಳಕೆಯೊಡೆದಿಲ್ಲವೆಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವಾರದಿಂದ ಚಿಕ್ಕೋಡಿ ಭಾಗದಲ್ಲಿ ಉತ್ತಮ ಮಳೆ ಸುರಿದಿದ್ದ ಪರಿಣಾಮ ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಿ, ಸೋಯಾಬೀನ್ ಬಿತ್ತಿದ್ದಾರೆ. ಆದರೆ, ಈ ಸೋಯಾಬೀನ್ ಬೀಜಗಳು ಕಳಪೆ ಗುಣಮಟ್ಟದ್ದಾಗಿದ್ದರಿಂದ ಕೆಲವೆಡೆ ಬಿತ್ತಿದ ಬೀಜಗಳು ಈವರೆಗೂ ಮೊಳಕೆ ಒಡೆದಿಲ್ಲ.
ಈಗಾಗಲೇ ಕೊರೊನಾ ವೈರಸ್ನಿಂದ ಕಂಗಾಲಾದ ರೈತರು, ಸೂಕ್ತ ಮಾರುಕಟ್ಟೆಯಿಲ್ಲದೆ ಬೆಳೆದ ಬೆಳೆ ನಾಶವಾಗಿದೆ ಎಂದು ವ್ಯಥೆ ಪಡುತ್ತಿದ್ದಾರೆ. ಈ ಮಧ್ಯೆ ಮುಂಗಾರು ಹಂಗಾಮಿನ ಆರಂಭದಲ್ಲಿಯೇ ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜಗಳ ಹಾವಳಿ ಹೆಚ್ಚಿರುವುದು ರೈತರ ನಿದ್ದೆಗೆಡಿಸಿದೆ.
ಈ ಸೋಯಾಬೀನ್ ಬೀಜಗಳನ್ನು ಕೃಷಿ ಇಲಾಖೆಯಿಂದಲೇ ಖರೀದಿಸಿ ಬಿತ್ತನೆ ಮಾಡಲಾಗಿದೆ. ಆದರೆ, ಸರಿಯಾದ ಪ್ರಮಾಣದಲ್ಲಿ ಕೃಷಿ ಅಧಿಕಾರಿಗಳು ತಪಾಸಣೆ ಮಾಡದೆ ಕಳಪೆ ಬೀಜಗಳನ್ನು ಕೊಟ್ಟು ಮೋಸ ಮಾಡಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಚಿಕ್ಕೋಡಿ ಉಪವಿಭಾಗದ ಹಲವು ಭಾಗದಲ್ಲಿ ಬಿತ್ತನೆ ಕಾರ್ಯವಾಗಿದೆ. ಆದರೆ ಮೊಳಕೆ ಪ್ರಮಾಣ ಕಡಿಮೆ ಆಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಒಂದು ವೇಳೆ ಬಿತ್ತನೆ ಮಾಡಿದ ಬೀಜದ ಇಳುವರಿ ಬಾರದಿದ್ದರೆ, ಇದರ ನಷ್ಟವನ್ನು ಸರ್ಕಾರ ತುಂಬಿಕೊಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ರೈತೆರು ಎಚ್ಚರಿಸಿದ್ದಾರೆ.