ಬೆಳಗಾವಿ: ಸಿನಿಮೀಯಾ ರೀತಿಯಲ್ಲಿ ಹುಬ್ಬಳ್ಳಿ ಮೂಲದ ಉದ್ಯಮಿಯೊಬ್ಬರನ್ನು ಅಪಹರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ 8 ಮಂದಿ ಆರೋಪಿಗಳನ್ನು ಬೆಳಗಾವಿ ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಕ್ರಿಪ್ಟೋ ಕರೆನ್ಸಿ ಉದ್ಯಮಿ ರವಿಕಿರಣ್ ಭಟ್ ಎಂಬುವವರನ್ನು ಆರೋಪಿಗಳು ಅಪಹರಿಸಿ, 3 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.
ಏನಿದು ಘಟನೆ?: ಯಲ್ಲಾಪುರ ಮೂಲದ ಹುಬ್ಬಳ್ಳಿ ನಿವಾಸಿ ರವಿಕಿರಣ್ ಭಟ್ ಜ.13ರಂದು ಬೆಳಗಾವಿಗೆ ಬಂದಿದ್ದರು. ಹುಬ್ಬಳ್ಳಿಯಿಂದ ಪುಣೆಗೆ ಕಾರಿನಲ್ಲಿ ತೆರಳುತ್ತಿದ್ದ ಅವರು ಜ.13ರ ತಡರಾತ್ರಿ ಬೆಳಗಾವಿ ಹೊರವಲಯದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಬಳಿಕ ಜ.14ರಂದು ರೆಸಾರ್ಟ್‌ನಿಂದ ಪುಣೆಯತ್ತ ಪ್ರಯಾಣ ಬೆಳೆಸಿದ್ದರು. ಈ ವೇಳೆ ರವಿಕಿರಣ್ ಅವರ ಕಾರನ್ನು ಜೆಎನ್‌ಎಂಸಿ ವೈದ್ಯಕೀಯ ಕಾಲೇಜು ಬಳಿ ತಡೆಯಲಾಗಿದೆ.
ಬೈಕ್‌ನಲ್ಲಿ ಬಂದಿದ್ದ ಓರ್ವ ಆರೋಪಿ ಬೈಕ್‌ಗೆ ಕಾರು ಟಚ್ ಮಾಡಿ ಎಸ್ಕೇಪ್ ಆಗುತ್ತಿದ್ದೀಯಾ? ಎಂದು ವಾಗ್ವಾದ ಆರಂಭಿಸಿದ್ದಾನೆ. ಅಷ್ಟರಲ್ಲೇ ಮತ್ತೆರಡು ಬೈಕ್‌ನಲ್ಲಿ ಬಂದ ನಾಲ್ವರು ಉದ್ಯಮಿ ಜತೆ ಜಗಳ ತೆಗೆದಿದ್ದಾರೆ. ಉದ್ಯಮಿ ರವಿಕಿರಣ್ ಜತೆ ಜಗಳವಾಡುತ್ತಲೇ ಮೂವರು ಕಾರು ಹತ್ತಿದ್ದಾರೆ. ಬಳಿಕ ಹಿಂಬದಿಯಿಂದ ರಿವಾಲ್ವರ್ ತೋರಿಸಿ, ತಾವು ಹೇಳಿದ ಕಡೆ ಕಾರು ಚಾಲನೆ ಮಾಡುವಂತೆ ಬೆದರಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
3 ಕೋಟಿ ರೂ.ಗೆ ಬೇಡಿಕೆ: ಜೆಎನ್‌ಎಂಸಿ ಕಾಲೇಜಿನಿಂದ ಖಾನಾಪುರ ಬಳಿ ಕೋಳಿ ಫಾರ್ಮ್‌ಗೆ ಕರೆದೊಯ್ದ ಆರೋಪಿಗಳು ನಂತರ ಅವರನ್ನು ಕೂಡಿಹಾಕಿದ್ದಾರೆ. ಕುರ್ಚಿ ಮೇಲೆ ಕೂರಿಸಿ ಕೈ-ಕಾಲು ಕಟ್ಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮೊದಲು 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಆರೋಪಿಗಳು ಬಳಿಕ ರವಿಕಿರಣ್ ಬಳಿ ಇದ್ದ 55 ಸಾವಿರ ನಗದು, ಆ್ಯಪಲ್ ವಾಚ್, ಮೊಬೈಲ್, ಚಿನ್ನ ಹಾಗೂ ಬೆಳ್ಳಿಯ ನಾಣ್ಯ, 75 ಸಾವಿರ ಮೌಲ್ಯದ ಯುಎಸ್ ಕರೆನ್ಸಿ ಕಿತ್ತುಕೊಂಡಿದ್ದಾರೆ. ಬಳಿಕ ರವಿಕಿರಣ್ ಮೊಬೈಲ್‌ನಿಂದ ಪತ್ನಿಗೆ ಕರೆ ಮಾಡಿ 3 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ.
ಮಾರನೇ ದಿನ ಬೆಳಗ್ಗೆ ಅಪಹರಣಕಾರರಿಂದ ತಪ್ಪಿಸಿಕೊಂಡ ರವಿಕಿರಣ್ ದಾಂಡೇಲಿಗೆ ತೆರಳಿದ್ದಾರೆ. ಅಲ್ಲಿಂದ ತನ್ನ ಪತ್ನಿಗೆ ಕರೆ ಮಾಡಿ ಹುಬ್ಬಳ್ಳಿಯ ಮನೆಗೆ ಹೋಗಿದ್ದಾರೆ. ಮೂರು ದಿನಗಳ ಬಳಿಕ ಜ.18ರಂದು ಬೆಳಗಾವಿ ಎಪಿಎಂಸಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡು ತನಿಖೆಗಿಳಿದ ಎಪಿಎಂಸಿ ಠಾಣೆ ಪೊಲೀಸರು ಬೆಳಗಾವಿಯಲ್ಲಿ ಇಬ್ಬರು, ಖಾನಾಪುರದ ಓರ್ವ ಹಾಗೂ ಗೋವಾದಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಆಹಾರ ಹುಡುಕಿ ಬಂದ 7 ನವಿಲುಗಳಿಗೆ ಇಲಿ ಪಾಷಾಣ ಹಾಕಿ ಕೊಂದ ವ್ಯಕ್ತಿ ಬಂಧನ