ಬೆಳಗಾವಿ: ಖೋಟಾ ನೋಟಿನ ವ್ಯವಹಾರ ಮಾಡುವ ಮೂಲಕ ಜನರಿಗೆ ಮೋಸ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಗೋಕಾಕ್ ತಾಲೂಕಿನ ದೂಪದಾಳ ಗ್ರಾಮದ ಮಹಮದ್ ಇಸಾಕ್ ದೇಸಾಯಿ, ಮುನಾಫ್ ರಫೀಕ್, ರಾಯಬಾಗ ತಾಲೂಕಿನ ಸಿದ್ದಾಪೂರದ ಗುಂಡು ಸದಾಶಿವ ಪಾಟೀಲ ಮತ್ತು ಗೋಕಾಕದ ಆದಿಜಾಂಬವ ನಗರದ ಮಲ್ಲಿಕಾರ್ಜುನ ಕನ್ಮಡ್ಡಿ ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳು ಮೇಲ್ಭಾಗ ಮತ್ತು ಕೆಳಭಾಗದ ಎರಡೂ ಬದಿಗೆ 500 ರೂ.ಗಳ ಅಸಲಿ ನೋಟು ಇಟ್ಟು ಒಳಭಾಗದಲ್ಲಿ ಕಾಗದದ ಕಟ್ಟಿಂಗ್ ಪೇಪರ್ ಗಳನ್ನು ಇಡುವ ಮೂಲಕ ಅಸಲಿ ನೋಟಿನ ಬಂಡಲ್‍ಗಳಂತೆ ಅವುಗಳನ್ನು ಬಂಡಲ್‍ಗಳನ್ನಾಗಿ ಮಾಡುತ್ತಿದ್ದರು. 1 ಲಕ್ಷ ರೂ.ಗಳ ಅಸಲಿ ನೋಟಿನ ಕಂತನ್ನು ತಯಾರಿಸಿ ತಮ್ಮ ಬಳಿಯಿದ್ದ 3 ಲಕ್ಷ ರೂ ಖೋಟಾ ನೋಟನ್ನು ಯಾರಿಗೋ ಕೊಡಲು ಆರೋಪಿಗಳು ಯೋಜನೆ ರೂಪಿಸಿದ್ದರು.
ಈ ಕುರಿತಂತೆ ಖಚಿತ ಮಾಹಿತಿ ಪಡೆದು ದಾಳಿ ಮಾಡಿದ ಘಟಪ್ರಭಾ ಪೊಲೀಸರು, ಆರೋಪಿಗಳನ್ನು ಬಂಧಿಸಿ ಅವರಿಂದ ಪೇಪರ್ ಬಂಡಲ್‌ಗಳು, ತಲಾ 2 ಕಾರ್ ಹಾಗೂ ದ್ವಿ ಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ದಾಳಿಯಲ್ಲಿ ಘಟಪ್ರಭಾ ಪಿಎಸ್‍ಐ ಎಚ್.ವೈ.ಬಾಲದಂಡಿ ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.