ಬೆಳಗಾವಿ: ಸಹೋದರನ ಕಿರುಕುಳ ತಾಳಲಾರದೇ ಹೊಲದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಅಣ್ಣನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಉಚಗಾಂವ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶ್ರೀಕಾಂತ ಅಪ್ಪಾಜಿ ಜಾಧವ್(56) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಮೃತ ಶ್ರೀಕಾಂತ್ ಮತ್ತು ಆತನ ತಮ್ಮ ಮಧುಕರ್ ಜಾಧವ್ ನಡುವೆ ಜಮೀನು ವಿವಾದವಿತ್ತು. ಪದೇ ಪದೆ ಶ್ರೀಕಾಂತ್ಗೆ ಸಹೋದರ ಮಧುಕರ್ ಕಿರುಕುಳ ನೀಡುತ್ತಿದ್ದನಂತೆ. ಇದರಿಂದ ಬೇಸತ್ತು ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಶ್ರೀಕಾಂತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಕರಣ ಹಿನ್ನೆಲೆ: ಮಧುಕರ್ ಜಾಧವ್ ಮೃತ ಶ್ರೀಕಾಂತ್ ಹಾಗೂ ಅವರ ತಂದೆ ಅಪ್ಪಾಜಿಗೆ ತಿಳಿಸದೇ ನಾಲ್ಕು ವರ್ಷದ ಹಿಂದೆ ಸುಧೀರ್ ಗಡ್ಡೆ ಎಂಬ ಬಿಲ್ಡರ್ಗೆ 28 ಲಕ್ಷ ರೂಪಾಯಿಗೆ 1 ಎಕರೆ 6 ಗುಂಟೆ ಜಮೀನು ಮಾರಾಟ ಮಾಡಿದ್ದನಂತೆ. ಇದು ಗೊತ್ತಾದ ಮೇಲೆ ಮಧುಕರ್ ಮೇಲೆ ಶ್ರೀಕಾಂತ್ ಕೇಸ್ ಹಾಕಿದ್ದರು. ನಂತರ ರಾಜಿ ಪಂಚಾಯಿತಿ ಮಾಡಿ ಸಮಾಧಾನಪಡಿಸಲು ಮಧುಕರ್ ಮುಂದಾಗಿದ್ದ ಎನ್ನಲಾಗಿದೆ.
ನಂತರ ಸಬ್ ರಜಿಸ್ಟರ್ ಕಡೆ ಹೋಗಿ ಸಹಿ ಮಾಡಿಸಿ ಶ್ರೀಕಾಂತಗೆ 6 ಲಕ್ಷ ರೂಪಾಯಿ ಕೊಟ್ಟು ಮಧುಕರ್ ಕೈತೊಳೆದುಕೊಂಡು ಬಿಟ್ಟಿದ್ದ. ನಂತರ ತಮಗಾದ ಮೋಸಕ್ಕೆ ನ್ಯಾಯ ಕೊಡಿಸುವಂತೆ ಗ್ರಾಮದ ಹಿರಿಯರ ಬಳಿ ಶ್ರೀಕಾಂತ್ ಹೋದರೂ ಗ್ರಾಮದ ಹಿರಿಯರ ಮೇಲೆ ಮಧುಕರ್ ಮತ್ತು ಆತನ ಪತ್ನಿ ಗ್ರಾಮ ಪಂಚಾಯಿತಿ ಸದಸ್ಯೆ ಭಾರತಿ ಒತ್ತಡ ಹಾಕಿದ್ದ. ಇದರಿಂದ ಮನನೊಂದು ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ಶ್ರೀಕಾಂತ್ ಪುತ್ರ ಸಂತೋಷ ಆರೋಪಿಸಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕಾಕತಿ ಪೊಲೀಸರು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ: ಕೇರಳದ ಸಿಪಿಐ ಕೇಂದ್ರ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆದು ವ್ಯಕ್ತಿ ಪರಾರಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ