ಬೆಳಗಾವಿ: ಭಾರತ ಪ್ರವಾಸದ ವೇಳೆ ಪಾಸ್‌ಪೋರ್ಟ್ ನಿಯಮ ಉಲ್ಲಂಘಿಸಿದ್ದ ಇಂಡೋನೇಷ್ಯಾ ಮೂಲದ 10 ಜನ ತಬ್ಲಿಘಿಗಳಿಗೆ ಬೆಳಗಾವಿಯ ಎರಡನೇ ಜೆಎಂಎಫ್ಸಿ ನ್ಯಾಯಾಲಯ ಎರಡು ದಿನ ಜೈಲು ಶಿಕ್ಷೆ ಹಾಗೂ ತಲಾ ಒಬ್ಬರಿಗೆ 20 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಭಾರತದ ಪ್ರೇಕ್ಷಣೀಯ ಸ್ಥಳ ವೀಕ್ಷಿಸುವುದಾಗಿ ವೀಸಾ ಪಡೆದಿದ್ದ ತಬ್ಲಿಘಿಗಳು ಇಲ್ಲಿ ಧರ್ಮಪ್ರಚಾರದಲ್ಲಿ ತೊಡಗಿದ್ದರು. ಪ್ರೇಕ್ಷಣೀಯ ಸ್ಥಳ ವೀಕ್ಷಿಸುವ ಬದಲು ದೆಹಲಿಯಲ್ಲಿ ಆಯೋಜಿಸಿದ್ದ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಆ ಮೂಲಕ ಪಾಸ್‌ಪೋರ್ಟ್ ನಿಯಮಗಳನ್ನು ಇವರೆಲ್ಲ ಉಲ್ಲಂಘಿಸಿದ್ದರು.
ಲಾಕ್ಡೌನ್ ವೇಳೆ ಅಂತಾರಾಷ್ಟ್ರೀಯ ವಿಮಾನ ಸೇವೆ ಸ್ಥಗಿತಗೊಂಡ ಕಾರಣ ಇವರೆಲ್ಲರೂ ಜಿಲ್ಲೆಗೆ ಆಗಮಿಸಿ ಧಾರ್ಮಿಕ ಪ್ರಚಾರದಲ್ಲಿ ತೊಡಗಿದ್ದರು. ಮಸೀದಿಯಲ್ಲಿ ವಾಸ್ತವ್ಯ ಹೂಡಿದ್ದ ಇವರನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿ ಪಾಸ್‌ಪೋರ್ಟ್ ವಶಪಡಿಸಿಕೊಂಡಿದ್ದರು.
10 ಜನ ತಬ್ಲಿಘಿಗಳ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು. ನ್ಯಾಯಾಂಗ ಬಂಧನದ ವೇಳೆ ಎರಡು ದಿನ ಜೈಲಲ್ಲಿರುವುದನ್ನು ಹೊಂದಾಣಿಕೆ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ಅಲ್ಲದೇ ತಲಾ ಒಬ್ಬರಿಗೆ 20 ಸಾವಿರ ದಂಡವಿಧಿಸಿ ಎರಡನೇ ಜೆಎಂಎಫ್ಸಿ ನ್ಯಾಯಾಧೀಶರಾದ ಬಿ.ವಿ. ಲಲಿತಾಶ್ರೀ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಮಹಾಂತೇಶ ಚಳಕೊಪ್ಪ ವಕಾಲತ್ತು ವಹಿಸಿದ್ದರು.