ಚಿಕ್ಕೋಡಿ (ಬೆಳಗಾವಿ) : ಯಾವುದೇ ಸಂತ, ಸಾಧು, ಮುನಿಗಳ ಹತ್ಯೆ ಮಹಾಪಾಪ. ಇಂತಹ ಕೃತ್ಯಗಳ ಹಿಂದೆ ಭಾರತ ದೇಶ ಒಡೆಯುವ ಷಡ್ಯಂತ್ರ ಇರುತ್ತದೆ ಎಂದು ಮುನಿಶ್ರೀ ಅಜಯ್ ಸಾಗರ ಹೇಳಿದರು. ಜಿಲ್ಲೆಯ ಸದಲಾಗ ಪಟ್ಟಣದಲ್ಲಿ ಹಿರೇಕೋಡಿ ನಂದಿ ಪರ್ವತದ ಜೈನ ಆಚಾರ್ಯ ಜಿನೈಕ್ಯ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯನ್ನು ಖಂಡಿಸಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾರತ ಅಹಿಂಸಾ ಧರ್ಮದ ಮೇಲೆ ಇಲ್ಲಿಯವರೆಗೆ ಬಂದು ತಲುಪಿದೆ. ಜೈನಮುನಿಗಳ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಮುಂದೆ ಯಾವುದೇ ಸಾಧು ಸಂತರ ಮೇಲೆ ಈ ರೀತಿಯ ಕೃತ್ಯ ನಡೆಯಬಾರದು ಎಂದರು.
ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಘಟನೆಯಿಂದ ಇಡೀ ಮನುಕುಲಕ್ಕೆ ಬಹಳ ದೊಡ್ಡ ಆಘಾತವಾಗಿದೆ. ಭಾರತ ದೇಶ ಧರ್ಮ ಪ್ರಧಾನ ದೇಶ. ಸರ್ವಧರ್ಮ ಸಮಭಾವ ಇರುವ ದೇಶ. ಭಾರತ ಧ್ವಜದ ಕೆಳಗೆ ವಿವಿಧ ಧರ್ಮ, ಜಾತಿಯ ಜನರಿದ್ದಾರೆ. ಸಂತರಿಗೆ ಈ ರೀತಿ ಮಾಡುವುದು ಭಾರತವನ್ನು ಒಡೆಯುವ ಷಡ್ಯಂತ್ರ ಎಂದು ಹೇಳಿದರು.
ಮಾನವೀಯತೆಯ ಹತ್ಯೆ ಆಗುತ್ತಿದೆ. ಇದರಲ್ಲಿ ರಾಜಕಾರಣ ಮಾಡಬಾರದು. ಧರ್ಮ ಸುರಕ್ಷಿತವಾಗಿದ್ದರೆ ರಾಷ್ಟ್ರ ಸುರಕ್ಷಿತವಾಗಿರುತ್ತದೆ. ಧರ್ಮದಲ್ಲಿ ರಾಜಕೀಯ ಬಂದರೆ ಧರ್ಮ ಕೆಡುತ್ತದೆ. ಆದ್ರೆ ರಾಜಕೀಯದಲ್ಲಿ ಧರ್ಮ ಬಂದರೆ ಶುದ್ಧೀಕರಣ ಆಗುತ್ತದೆ. ಜೈನಮುನಿಗಳ ಹಂತಕರಿಗೆ ಉಗ್ರ ಶಿಕ್ಷೆಯಾಗಲಿ. ಎಷ್ಟು ಉಗ್ರ ಶಿಕ್ಷೆಯಾಗಬೇಕು ಅಂದರೆ ಮುಂದೆ ಯಾರೂ ಈ ರೀತಿ ಕೃತ್ಯ ಮಾಡಬಾರದು ಅಂತಹ ಶಿಕ್ಷೆ ನೀಡಬೇಕು ಎಂದು ಮುನಿಶ್ರೀ ಆಗ್ರಹಿಸಿದರು.
ಮುನಿಶ್ರೀ ಪ್ರಶಾಂತ ಸಾಗರ ಮಾತನಾಡಿ, ಮುನಿಗಳ ಹತ್ಯೆ ಪ್ರಕರಣದಲ್ಲಿ ರಾಜಕೀಯ ನಡೆಯುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಿಂದನೀಯ ಕೃತ್ಯ. ಈ ರೀತಿ ಎಲ್ಲೂ ನಡೆಯಬಾರದು. ಅಜ್ಞಾನದಿಂದ ಹತ್ಯೆ ಮಾಡಿದ್ದನ್ನು ನಾವು ಖಂಡಿಸುತ್ತೇವೆ. ಮುನಿಗಳ ಹತ್ಯೆಯಲ್ಲಿ ರಾಜಕೀಯ ಪಕ್ಷಗಳು ರಾಜಕಾರಣ ಮಾಡಬಾರದು. ರಾಜಕೀಯ ಮಾಡಿದರೆ ಜೈನಧರ್ಮಕ್ಕೆ ಅಪಮಾನ ಮಾಡಿದಂತಾಗುತ್ತದೆ. ರಾಜಕಾರಣ ಬದಿಗೊತ್ತಿ ನಿಷ್ಪಕ್ಷಪಾತ ತನಿಖೆಯಾಗಲಿ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಸದಲಗಾ ಪಟ್ಟಣ ಸಂಪೂರ್ಣ ಬಂದ್ : ಮುನಿಗಳ ಹತ್ಯೆ ಖಂಡಿಸಿ ಸದಲಗಾ ಪಟ್ಟಣವನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಲಾಗಿತ್ತು. ಎಲ್ಲ ಅಂಗಡಿ ವ್ಯಾಪಾರಸ್ಥರು ತಮ್ಮ ವ್ಯಾಪಾರ ವಹಿವಾಟು ಮುಚ್ಚಿ ಬಂದ್ಗೆ ಬೆಂಬಲ ಸೂಚಿಸಿದ್ದರು. ಶ್ರೀಗಳ ಹತ್ಯೆ ಆರೋಪಿತರಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಇದೇ ವೇಳೆ ಸರ್ಕಾರವನ್ನು ಒತ್ತಾಯಿಸಿದರು.
ಇದನ್ನೂ ಓದಿ : ಜೈನ ಮುನಿ, ಯುವ ಬ್ರಿಗೇಡ್ ಸಂಚಾಲಕನ ಹತ್ಯೆ ಖಂಡಿಸಿ ಬಿಜೆಪಿ ಶಾಸಕರ ಪ್ರತಿಭಟನೆ; ರಾಜ್ಯಪಾಲರಿಗೆ ದೂರು