ಬೆಂಗಳೂರು/ಬೆಳಗಾವಿ: ರಾಜ್ಯಸಭೆ ಮಾದರಿಯಲ್ಲಿ ವಿಧಾನ ಪರಿಷತ್ ಕಲಾಪವನ್ನು ಕ್ರಿಯಾಶೀಲವಾಗಿ ನಡೆಸಲು ಬದ್ದನಿದ್ದು, ಪಕ್ಷಾತೀತವಾಗಿ,ಜಾತ್ಯತೀತವಾಗಿ ಸಂವಿಧಾನದ ಬೇರುಗಳನ್ನು ಗಟ್ಟಿಗೊಳಿಸಲು ಶುದ್ಧ ಅಂತಃಕರಣದಿಂದ ಕೆಲಸ ಮಾಡುತ್ತೇನೆ ಎಂದು ನೂತನ ಸಭಾಪತಿ ಬಸವರಾಜ ಹೊರಟ್ಟಿ ಭರವಸೆ ನೀಡಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಕಲಾಪದಲ್ಲಿ ನೂತನ ಸಭಾಪತಿಯಾಗಿ ಆಯ್ಕೆಯಾದ ನಂತರ ಸದಸ್ಯರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು 115 ವರ್ಷದ ಇತಿಹಾಸವಿರುವ ವಿಧಾನ ಪರಿಷತ್ ನಲ್ಲಿ ಸಭಾಪತಿಯಾಗಿ ಕೆಲಸ ಮಾಡಲು ಅವಕಾಶ ನನಗೆ ಒದಗಿ ಬಂದಿರುವುದು ನನ್ನ ಪುಣ್ಯ, ಚಿಂತಕರ ಚಾವಡಿಯಾದ ಮೇಲ್ಮನೆ ರಾಜ್ಯವನ್ನು ಸಾಮಾಜಿಕ,ಆರ್ಥಿಕ, ಶೈಕ್ಷಕಣಿಕವಾಗಿ ಕಟ್ಟುವಲ್ಲಿ ಕಾಲ ಕಾಲಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿದೆ ಎಂದರು.
ವಿದ್ವತ್ ಪೂರ್ಣ ಸದನ ಅಗತ್ಯ ಸಲಹೆ ನೀಡುತ್ತಾ ಬಂದಿದೆ.ಕನ್ನಡ ನಾಡು, ನುಡಿ, ನೆಲ,ಜಲದ ವಿಚಾರದಲ್ಲಿ ನಾಡಿನ ಏಳಿಗೆಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು,ಸದನದಲ್ಲಿ ಚರ್ಚೆಗಳು ಅರ್ಥಪೂರ್ಣವಾಗಿರಬೇಕು ಎಂದು ರಾಜ್ಯಸಭೆ ಮಾದರಿಯಲ್ಲಿ ಸದನವನ್ನು ಕ್ರಿಯಾಶೀಲ ಮತ್ತು ಸಂಸದೀಯ ವ್ಯವಸ್ಥೆಯಂತೆ ಮಾದರಿಯಾಗಿ ನಡೆಸಲು ಬದ್ಧನಿದ್ದೇನೆ ಎಂದು ಹೇಳಿದರು.
ರಾಜಕೀಯ ಗುರುಗಳು, ಮಾರ್ಗದರ್ಶನಕರ ನೆನೆದ ಹೊರಟ್ಟಿ: ಬಿಜೆಪಿ ಮೇಲೆ ನಂಬಿಕೆ ಇಟ್ಟು ಬಂದು 8ನೇ ಬಾರಿ ಸ್ಪರ್ಧಿಸಿ ಗೆದ್ದಿದ್ದೇನೆ, ಅಂತಾರಾಷ್ಟ್ರೀಯ ದಾಖಲೆ ನಿರ್ಮಿಸಿದ್ದೇನೆ. ಈ ವೇಳೆ ನನ್ನ ರಾಜಕೀಯ ಗುರು ರಾಮಕೃಷ್ಣ ಹೆಗಡೆ, ಹೆಚ್.ಡಿ ದೇವೇಗೌಡ, ಎಸ್ಆರ್ ಬೊಮ್ಮಾಯಿ, ಜೆಹೆಚ್ ಪಟೇಲ್, ಆರ್.ಎಲ್ ಜಾಲಪ್ಪ, ನಜೀರ್ ಸಾಬ್, ಚಂದ್ರೇಗೌಡ ಸೇರಿದಂತೆ ಹಲವರ ಮಾರ್ಗದರ್ಶನವನ್ನು ಸ್ಮರಿಸಿದರು.
ಕುಮಾರಸ್ವಾಮಿಯವರನ್ನೂ ನಾನು ನೆನಪಿಸಿಕೊಳ್ಳಬೆಕು, ಅವರನ್ನು ಎಂದೂ ಮರೆಯಲ್ಲ ಈ ಸ್ಥಾನಕ್ಕೆ ಬರಲು ಅವರೂ ಕಾಣರ, ನನ್ನನ್ನು ರಾಜ್ಕಯಕ್ಕೆ ಪರಿಚಯಿಸಿದವರು ಅವರು. ಅವಿರೋಧ ಆಯ್ಕೆಗೆ ಸಹಕರಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಕಾಂಗ್ರೆಸ್ ಸದಸ್ಯರು ಮತ್ತು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ, ಕುಮಾರಸ್ವಾಮಿ, ಸಿ ಎಂ ಇಬ್ರಾಹಿಂ, ಬೋಜೇಗೌಡ ಹಾಗು ಇತರ ಸದಸ್ಯರಿಗೆ ಧನ್ಯವಾದ ಸಲ್ಲಿಸುತ್ತೇನೆ. ಬಿಜೆಪಿ ವರಿಷ್ಠರು, ಬಿಜೆಪಿ ಸದಸ್ಯರಿಗೆ ಧನ್ಯವಾದ ಸಲ್ಲಿಸುತ್ತೇನೆ. ಸದನದಲ್ಲಿ ಮಾತನಾಡಿದ 24 ಜನ ಸದಸ್ಯರಲ್ಲಿ ನಾನು ಅಭಾರಿಯಾಗಿದ್ದೇನೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಶಿಕ್ಷಕರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ: ರಾಜಕಾರಣ ವೃತ್ತಿಯಾಗದೆ ಸೇವೆಯಾಗಬೇಕು ಎನ್ನುವುದೇ ನನ್ನ ಅಪೇಕ್ಷೆ, ಈ ಹಿಂದೆ ಎರಡು ಬಾರಿ ಸಭಾಪತಿಯಾದಾಗ ಸದಸ್ಯರಿಂದ ಸಿಕ್ಕ ಸಹಕಾರ ಮರೆಯಲಾರೆ, ಮೂರನೇ ಬಾರಿ ಅವಕಾಶ ಸಿಕ್ಕಿದೆ. ಹೊಸ ದಿಕ್ಕಿನತ್ತ ಸದನವನ್ನು ಕೊಂಡೊಯ್ಯೋಣ, ನೆಲ ಜಲ, ಭಾಷೆ ವಿಚಾರದಲ್ಲಿ ರಾಜ್ಯದ ಜನರ ಹಿತಕ್ಕಾಗಿ ಪಕ್ಷ ಬೇಧ ಮರೆತು ಒಂದಾಗೋಣ, ಪಕ್ಷಾತೀತ, ಜಾತ್ಯತೀತವಾಗಿ, ಸಂವಿಧಾನದ ಬೇರು ಗಟ್ಟಿಗೊಳಿಸಲು ಶುದ್ಧ ಅಂತಃಕರಣದಿಂದ ಯುಕ್ತನಾಗಿ ಕೆಲಸ ಮಾಡುವುದಾಗಿ ಪ್ರಮಾಣ ಮಾಡಿ ಹೇಳುತ್ತೇನೆ. ಸಭಾಪತಿ ಪಕ್ಷಾತೀತವಾಗಿರಬೇಕು ಅದಕ್ಕಾಗಿ ಇಂದೇ ನಾನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾನೆ ನೀಡುತ್ತೇನೆ ಎಂದರು.
ಇದನ್ನೂ ಓದಿ:ಸೋಲಿಲ್ಲದ ಸರದಾರ ಬಸವರಾಜ ಹೊರಟ್ಟಿಗೆ 3ನೇ ಬಾರಿ ಸಭಾಪತಿ ಹುದ್ದೆ ನಿರ್ವಹಿಸುವ ಯೋಗ...