ಅಥಣಿ (ಬೆಳಗಾವಿ): ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲೂಕಿನ ಹಳಿಂಗಳಿಯ ಭದ್ರಗಿರಿ ಬೆಟ್ಟದ ಜೈನ ಮುನಿ 108 ಕುಲರತ್ನ ಭೂಷಣ ಮಹಾರಾಜ ಸ್ವಾಮೀಜಿ ಕೃಷ್ಣೆಯಿಂದ ನರ್ಮದಾವರೆಗೆ ಎಂಬ ಸಂಕಲ್ಪದೊಂದಿಗೆ ಸುಮಾರು 900 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದಾರೆ. ಹಳಿಂಗಳಿ ಗ್ರಾಮದಿಂದ ಪ್ರಾರಂಭವಾದ ಪಾದಯಾತ್ರೆ ಇವತ್ತು ಅಥಣಿಗೆ ಬಂದಿತು.
ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಆಗಮಿಸಿ ಮಹಾರಾಜರ ಆಶೀರ್ವಾದ ಪಡೆದರು. ಕುಲರತ್ನ ಭೂಷಣ ಮಹಾರಾಜರು ಮಾತನಾಡಿ, ಹೇಮಾವರ ಗುರುವಂದನೆ ತೀರ್ಥ ವಂದನಾ ಸಂದೇಶ ಇಟ್ಟುಕೊಂಡು ಕೃಷ್ಣೆಯಿಂದ ನರ್ಮದಾವರೆಗೆ ಎಂಬ ಸಂಕಲ್ಪ ಮಾಡಿ 108 ಆಚಾರ್ಯ ಶ್ರೀ ವಿದ್ಯಾಸಾಗರ ಮುನಿಮಹಾರಾಜರು ದೀಕ್ಷೆ ತೆಗೆದುಕೊಂಡು 55 ವರ್ಷ ಕಳೆಯಿತು. ಆದರೆ ಅವರು ಇಲ್ಲಿಯವರೆಗೆ ಕರ್ನಾಟಕಕ್ಕೆ ಪಾದಾರ್ಪಣೆ ಮಾಡಿಲ್ಲ. ಆಚಾರ್ಯರು ಕರ್ನಾಟಕಕ್ಕೆ ಪಾದಾರ್ಪಣೆ ಮಾಡಬೇಕು, ಇಲ್ಲಿಯೂ ಜೈನ ಧರ್ಮದ ಪ್ರಚಾರವಾಗಬೇಕು. ಪಂಚಮಕಾಲದಲ್ಲಿ ದಕ್ಷಿಣ ಭಾರತದಲ್ಲಿ ಧರ್ಮ ಉಳಿಯುತ್ತದೆ ಎಂದು ಜೈನ ಸಿದ್ದಾಂತದಲ್ಲಿ ಹೇಳಲಾಗಿದೆ. ಆ ಸಿದ್ದಾಂತ ಸತ್ಯವಾಗಬೇಕಾದರೆ ಆಚಾರ್ಯ ವಿದ್ಯಾಸಾಗರ ಮುನಿರಾಜರು ಈ ದಕ್ಷಿಣ ಭಾರತಕ್ಕೆ ಆಗಮಿಸಬೇಕು ಎಂಬುವುದು ನಮ್ಮ ಆಸೆಯಾಗಿದೆ ಮತ್ತು ಭಕ್ತರ ಉದ್ದೇಶವೂ ಆಗಿದೆ. ಆದ್ದರಿಂದ ನಾನು ಅವರ ದರ್ಶನಕ್ಕೆ ಸುಮಾರು 900 ಕಿ.ಮೀ ಕ್ರಮಿಸಿ ವಿವಿಧ ಜೈನ ಮಠಗಳಿಗೆ ಭೇಟಿ ನೀಡುತ್ತಾ ಹೋಗುತ್ತಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಜೈನ ಸಮಾಜದ ಮುಖಂಡ ಸಂಜಯ ನಾಡಗೌಡಾ ಮಾತನಾಡಿ, ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ಸಂತರು ಆಚಾರ್ಯ ವಿದ್ಯಾಸಾಗರ ಮಹಾರಾಜರ ದರ್ಶನಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಆಚಾರ್ಯ ವಿದ್ಯಾಸಾಗರ ಮಹಾರಾಜರು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಬಾಲ ಬ್ರಹ್ಮಚಾರಿಯಾಗಿ ಉತ್ತರ ಕರ್ನಾಟಕದ ಪ್ರಸಿದ್ದ ಮುನಿಗಳಾಗಿ ಮಧ್ಯಪ್ರದೇಶ ಹೇಮಾವರಕ್ಕೆ ಹೋಗಿದ್ದವರು ಇಲ್ಲಿತನಕ ಮರಳಿ ಬಂದಿಲ್ಲ. ಅವರ ಮನೆಯ ಸದಸ್ಯರೆಲ್ಲರೂ ನಿರ್ವಾಸ ಮುನಿಗಳಾಗಿದ್ದಾರೆ. ಭಕ್ತರ ಆಸೆಯಂತೆ ವಿದ್ಯಾಸಾಗರ ಮುನಿಸ್ವಾಮಿಗಳನ್ನ ದಕ್ಷಿಣ ಭಾರತಕ್ಕೆ ಕರೆತಂದು ಅಹಿಂಸಾ ತತ್ವದ ಸಭೆಗಳನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲು ಕುಲರತ್ನ ಭೂಷಣ ಮಹಾರಾಜರು ಅಪಾರ ಭಕ್ತ ಸಮೂಹದೊಂದಿಗೆ ಪಾದಯಾತ್ರೆ ಹಮ್ಮಿಕೊಂಡಿರುವದಾಗಿ ಹೇಳಿದರು.