ಬೆಳಗಾವಿ : ನೆಲ, ಜಲದ ವಿಚಾರ ಬಂದಾಗ ನಾವು ಪಕ್ಷಾತೀತವಾಗಿ ನಿಲ್ಲುತ್ತೇವೆ ಎಂಬ ಸೂಚನೆಯನ್ನು ರಾಜ್ಯದ ವಿಧಾನ ಪರಿಷತ್ ಸದಸ್ಯರು ರವಾನಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ವಿಧಾನ ಪರಿಷತ್ನಲ್ಲಿ ಬೆಳಗಾವಿಯಲ್ಲಿ ಎಂಇಎಸ್ ದಾಂಧಲೆ ವಿಚಾರವಾಗಿ ನಡೆದ ಚರ್ಚೆಗೆ ಉತ್ತರಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ವಿವಿಧ ಹಂತದಲ್ಲಿ ಶಾಂತಿ ಕದಡುವ ಕಾರ್ಯ ರಾಜ್ಯದಲ್ಲಿ ಆಗಿದೆ. ಗಲಾಟೆ ನಿಯಂತ್ರಿಸುವಲ್ಲಿ ಪೊಲೀಸರ ವೈಫಲ್ಯ ಆಗಿಲ್ಲ.
ಬೆಳಗಾವಿಯಲ್ಲಿ ಸರ್ಕಾರಿ ವಾಹನದ ಮೇಲೆ ಕಲ್ಲೆಸೆದ 38 ಮಂದಿಯನ್ನು ಬಂಧಿಸಲಾಗಿದೆ. ಶಿವಾಜಿ ಪ್ರತಿಮೆಗೆ ಮಸಿ ಬಳಿದ ಪ್ರಕರಣದಲ್ಲಿ 8 ಮಂದಿ ಬಂಧನವಾಗಿದೆ. ಇನ್ನಷ್ಟು ಕಿಡಿಗೇಡಿಗಳನ್ನು ಬಂಧಿಸುತ್ತೇವೆ. ಯಾರನ್ನೂ ಕಾಪಾಡುವುದಿಲ್ಲ. ಇದು ಕನ್ನಡಿಗರು-ಮರಾಠಿಗರು, ಕರ್ನಾಟಕ- ಮಹಾರಾಷ್ಟ್ರ ರಾಜ್ಯದ ನಡುವಿನ ಸಂಘರ್ಷ ಅಲ್ಲ.
ಇದು ಕೆಲ ಕಿಡಿಗೇಡಿಗಳ ತೀಟೆ. ಇವರಿಗೆ ಒಂದು ಚೌಕಟ್ಟು ವಿಧಿಸಲು ಆಗಲ್ಲ. ಸ್ವಾತಂತ್ರ್ಯ ಹೋರಾಟಗಾರರನ್ನು ಬಳಸಿ ಜನರಲ್ಲಿ ಗದ್ದಲ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು. ಮಹಾರಾಷ್ಟ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜೊತೆ ಮಾತನಾಡಿದ್ದೇವೆ. ಯಾವುದೇ ಆತಂಕದ ಸನ್ನಿವೇಶ ಇಲ್ಲ. ತಪ್ಪು ಮಾಡಿದವರಿಗೆ ಜೀವನದಲ್ಲಿ ನೆನಪಿಡುವ ಶಿಕ್ಷೆ ವಿಧಿಸುತ್ತೇವೆ.
ಎಂಇಎಸ್ ಸಂಘಟನೆ ತಾನು ಜೀವಂತವಾಗಿದ್ದೇನೆ ಎಂದು ತೋರಿಸಲು ವರ್ಷಕ್ಕೊಮ್ಮೆ ಗದ್ದಲ ಸೃಷ್ಟಿಸುತ್ತಾರೆ. ಇದು ಕಿಡಿಗೇಡಿ ಕೃತ್ಯ, ಯಾರದ್ದೋ ಕುಮ್ಮಕ್ಕಿನಿಂದ ವ್ಯವಸ್ಥಿತವಾಗಿ ನಡೆಸಿದ ಕೃತ್ಯವಲ್ಲ. ಯಾವುದೇ ಆರೋಪಿಯನ್ನು ಕಾಪಾಡುವ ಕಾರ್ಯ ಮಾಡಲ್ಲ ಎಂದರು.
ಸದಸ್ಯರ ಬೇಸರ : ಈ ವೇಳೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ನಡೆಯಬಾರದ ಘಟನೆ ನಡೆದಿದೆ. ಇಲ್ಲಿನ ನೆಲ, ಜಲ, ಭಾಷೆಗಾಗಿ ಹೋರಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಎಂಇಎಸ್ ಕೃತ್ಯಕ್ಕೆ ತಕ್ಕ ಪಾಠ ಕಲಿಸಿಲ್ಲ. ಈ ಅಧಿವೇಶನ ಮುಗಿಯುವ ಮುನ್ನವೇ ತಪ್ಪಿತಸ್ಥರನ್ನು ಗಡಿಪಾರು ಮಾಡಬೇಕು.
ಎಂಇಎಸ್ ಸಂಘಟನೆ ನಿಷೇಧಿಸಬೇಕು. ನಾಡಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಹೊಣೆಗಾರಿಕೆ ವಹಿಸಿಕೊಂಡು ಎಂಇಎಸ್ ಪುಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು. ಯಾವುದೇ ಕಾರಣಕ್ಕೂ ಎಂಇಎಸ್ ಸಂಘಟನೆ ರಾಜ್ಯದಲ್ಲಿ ಇರಬಾರದು. ರಾಜ್ಯದಲ್ಲಿ ನಿಷೇಧಿಸಬೇಕು.
ಮಹಾರಾಷ್ಟ್ರ-ಕರ್ನಾಟಕದ ಜನ ಸೋದರತೆ ಮೆರೆಯುತ್ತಾರೆ. ಆದರೆ, ಕೆಲವರು ಕುಚೋದ್ಯಕ್ಕೆ ಈ ಕೃತ್ಯ ಎಸಗಿದ್ದಾರೆ. ಆರಂಭದಿಂದಲೂ ಎಚ್ಚರ ವಹಿಸಬೇಕಿತ್ತು. ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಮಾತನಾಡಿದ ಸದಸ್ಯರು ಒತ್ತಾಯಿಸಿದರು.
ಸದಸ್ಯರಾದ ಶ್ರೀಕಂಠೇಗೌಡ, ಯು.ಬಿ. ವೆಂಕಟೇಶ್, ಪುಟ್ಟಣ್ಣ, ಎಂ. ನಾರಾಯಣಸ್ವಾಮಿ, ತಿಪ್ಪೇಸ್ವಾಮಿ, ಬಿ.ಕೆ. ಹರಿಪ್ರಸಾದ್, ತೇಜಸ್ವಿನಿಗೌಡ, ಮರಿತಿಬ್ಬೇಗೌಡ, ರವಿಕುಮಾರ್, ಪ್ರತಾಪ್ ಸಿಂಹ ನಾಯಕ್, ಪ್ರಕಾಶ್ ರಾಥೋಡ್, ಶಿವಣ್ಣ, ಆರ್.ಬಿ. ತಿಮ್ಮಾಪೂರ್, ಅ. ದೇವೇಗೌಡ, ಎಸ್. ರವಿ ಸೇರಿದಂತೆ 20ಕ್ಕೂ ಹೆಚ್ಚು ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಆರಗ ಜ್ಞಾನೇಂದ್ರ ರಾಜೀನಾಮೆ ನೀಡಲಿ : ರಾಜ್ಯ ಒಬ್ಬ ದುರ್ಬಲ ಗೃಹಮಂತ್ರಿಯನ್ನು ಹೊಂದಿದೆ. ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಸಹಾಯಕ ಗೃಹಮಂತ್ರಿ. ಯತಾ ರಾಜ ತಥಾ ಪ್ರಜಾ ಅನ್ನುವ ಸ್ಥಿತಿ ಎದುರಾಗಿದೆ. ಇವರಿಂದ ರಾಜ್ಯವನ್ನು ಮುನ್ನಡೆಸಲು ಸಾಧ್ಯವಿಲ್ಲ. ದುರ್ಬಲ ಗೃಹ ಸಚಿವ ಇವರಾಗಿದ್ದಾರೆ. ಎಂದು ಕಾಂಗ್ರೆಸ್ ಸದಸ್ಯ ಎಸ್.ರವಿ ಆರೋಪಿಸಿದರು. ಆಗ ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.
ಕನ್ನಡಕ್ಕೆ, ಕನ್ನಡಿಗರ ಭಾವನೆಗೆ ಧಕ್ಕೆ ತರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸಭಾನಾಯಕ ಕೋಟ ಶ್ರೀನಿವಾಸ್ ಪೂಜಾರಿ ವಿವರಿಸಿದರು. ರಕ್ಷಣೆ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಒಂದು ದುರ್ಬಲ ಸರ್ಕಾರ ಇರುವುದರಿಂದ ಇಷ್ಟೊಂದು ಸಮಸ್ಯೆಯಾಗಿದೆ. ರಾಜ್ಯ, ಕನ್ನಡಿಗರ ಹಿತ ರಕ್ಷಣೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಸಭಾತ್ಯಾಗ : ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಪರಿಸ್ಥಿತಿ ತಿಳಿಯಾಗಿದೆ ಎಂದು ಗೃಹ ಸಚಿವರು ತಿಳಿಸುತ್ತಾರೆ. ಆದರೆ ಉತ್ತರದಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಮಸಿ ಬಳಿಯುವ ಕೃತ್ಯ ಮಾಡಿದ್ದಾರೆ. ಇಡೀ ಸರ್ಕಾರ ಇಲ್ಲಿರುವಾಗ ಇಷ್ಟೊಂದು ಕೃತ್ಯ ನಡೆಯುತ್ತಿರುವುದನ್ನು ನೋಡಿದರೆ ಯಾರಿಗೂ ಈ ಸರ್ಕಾರದ ಮೇಲೆ ಭಯ ಇಲ್ಲ ಅನ್ನುವುದು ಸಾಬೀತಾಗಿದೆ.
ಈ ಉತ್ತರ ನಮಗೆ ಸಮಾಧಾನ ತಂದಿಲ್ಲ. ಇಂತಹ ಗಂಭೀರ ಘಟನೆಯನ್ನು ನೀವು ಪ್ರಮುಖವೆಂದು ಪರಿಗಣಿಸಲ್ಲ. ನಿಮ್ಮ ಉತ್ತರದಲ್ಲಿ ಅಸಹಾಯಕತೆಯಿದೆ. ಈ ಉತ್ತರವನ್ನು ಧಿಕ್ಕರಿಸಿ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಹೊರನಡೆದರು. ಗೃಹ ಸಚಿವರ ಉತ್ತರ ಸಮಾಧಾನ ತಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಸಹ ತಾವು ಸಭಾತ್ಯಾಗ ಮಾಡುತ್ತೇವೆ ಎಂದು ಹೊರನಡೆದರು.