ಚಿಕ್ಕೋಡಿ: ಉಪಚುಣಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬೆಳಗಾವಿ ಜಿಲ್ಲೆಯ ಮೂವರು ನೂತನ ಶಾಸಕರಿಗೆ ಪ್ರಮಾಣವಚನ ಕಾರ್ಯಕ್ರಮ ಇಂದು ಬೆಂಗಳೂರಿನಲ್ಲಿ ನಡೆಯಲಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ಮತಕ್ಷೇತ್ರದ ರಮೇಶ್ ಜಾರಕಿಹೊಳಿ, ಅಥಣಿ ಕ್ಷೇತ್ರದ ಮಹೇಶ್ ಕುಮಟಳ್ಳಿ, ಕಾಗವಾಡ ಕ್ಷೇತ್ರದ ಶ್ರೀಮಂತ ಪಾಟೀಲ್ ಸೇರಿದಂತೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ ಶಾಸಕರಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೆಳಗ್ಗೆ 10 ಗಂಟೆಗೆ ಶಾಸಕರ ಪ್ರಮಾಣವಚನ ಸಮಾರಂಭ ನಡೆಯಲಿದೆ.
ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳ ಉಪಚುನಾವಣೆ ನಡೆದಿದ್ದು, ಈ ಮೂರು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಮೂವರಿಗೆ ಸಚಿವ ಸ್ಥಾನದ ಜೊತೆಗೆ ಹುಕ್ಕೇರಿ ಶಾಸಕ ಉಮೇಶ ಕತ್ತಿಗೂ ಇಂದು ಸಚಿವ ಸ್ಥಾನ ನೀಡುವ ನಿರೀಕ್ಷೆ ಇದೆ ಎಂದು ಕತ್ತಿ ಅವರ ಆಪ್ತರು ಹೇಳುತ್ತಿದ್ದಾರೆ.
ಒಟ್ಟಾರೆಯಾಗಿ ಬೆಳಗಾವಿಯಲ್ಲಿ ಈಗಾಗಲೇ ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಸಚಿವರಾಗಿದ್ದು, ಇನ್ನು ನಾಲ್ಕು ಸಚಿವ ಸ್ಥಾನಗಳು ಸಿಗುವ ನಿರೀಕ್ಷೆ ಇದೆ. ಈ ನಾಲ್ಕು ಜನ ಶಾಸಕರಿಗೆ ಯಾವ ಖಾತೆಗಳು ಸಿಗುತ್ತವೆ ಎಂಬುದು ಕುತೂಹಲ ಮೂಡಿಸಿದೆ.