ಚಿಕ್ಕೋಡಿ: ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ರಾಸು ಶೃಂಗಾರದ ಕಾರ ಹುಣ್ಣಿಮೆಯನ್ನು ಸರಳವಾಗಿ ಆಚರಿಸಿದರು.
ಮಳೆಗಾಲ ಆರಂಭದೊಂದಿಗೆ ಕೃಷಿ ಚಟುವಟಿಕೆಗಳಿಗೆ ಸಜ್ಜಾಗುವ ರೈತರು, ಕಾರ ಹುಣ್ಣಿಮೆ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದೊಂದಿಗೆ ಉತ್ತರ ಕರ್ನಾಟಕದ ಹಬ್ಬಗಳ ಸರಣಿ ಆರಂಭವಾಗುತ್ತದೆ. ಕಾರ ಹುಣ್ಣಿಮೆಯ ಕೇಂದ್ರ ಬಿಂದು ರೈತನ ಸಂಗಾತಿ ಎತ್ತು. ಮಳೆ ಪ್ರಾರಂಭವಾಗುವಾಗ ಎತ್ತುಗಳನ್ನು ಪೂಜಿಸಿ ಉಳುಮೆಗೆ ಸಿದ್ಧತೆ ಮಾಡುವುದು ಕಾರ ಹುಣ್ಣಿಮೆಯ ಸಂಕೇತವಾಗಿದೆ.
ಬೆಳಗಾವಿಯ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕಾರ ಹುಣ್ಣಿಮೆ ಹಬ್ಬದ ಸಂದರ್ಭ ಮನೆಗಳಲ್ಲಿ ಎತ್ತುಗಳನ್ನು ತಂದು ಪೂಜಿಸುವುದು ವಾಡಿಕೆ. ಅಲ್ಲದೆ ಹಬ್ಬಕೆಂದು ಕುಂಬಾರರು ಮಣ್ಣಿನಲ್ಲಿ ತಯಾರಿಸಿದ ಎತ್ತುಗಳನ್ನು ಮನೆಗೆ ತಂದು ಪೂಜಿಸುವ ಸಂಪ್ರದಾಯ ತಲೆಮಾರುಗಳಿಂದ ನಡೆದುಕೊಂಡು ಬಂದಿದೆ.
ರೈತರ ಭಾವನಾತ್ಮಕ ಸಂಬಂಧದ ಪ್ರತೀಕವಾದ ಕಾರ ಹುಣ್ಣಿಮೆ ದಿನದಂದು ಎತ್ತುಗಳನ್ನು ತೊಳೆದು, ಕೊಂಬುಗಳನ್ನು ಬಣ್ಣಗಳಿಂದ ಅಲಂಕರಿಸಿ, ಮೈತುಂಬ ಬಣ್ಣ ಹಚ್ಚಿ, ರಾಸು ಶೃಂಗರಿಸಿ ಮನೆಯಲ್ಲಿ ಹೊಳಿಗೆ ತಿನಿಸುತ್ತಾರೆ. ಸಾಯಂಕಾಲ ಊರಿನ ಪ್ರಮುಖ ಹಾದಿಯಲ್ಲಿ ಎರಡು ಎತ್ತುಗಳನ್ನು ಓಟಕ್ಕೆ ಬಿಡಲಾಗುತ್ತದೆ. ಒಂದು ಎತ್ತು ಹಿಂಗಾರು, ಇನ್ನೊಂದು ಎತ್ತು ಹಿಂಗಾರು ಎನ್ನಲಾಗುತ್ತದೆ. ಇದರಲ್ಲಿ ಯಾವ ಎತ್ತು ಪ್ರಥಮ ಬರುತ್ತದೆಯೋ ಆ ಬೆಳೆ ಚೆನ್ನಾಗಿ ಬರುತ್ತದೆ ಎನ್ನುವುದು ರೈತರ ನಂಬಿಕೆ. ಆದರೆ, ಈ ಬಾರಿ ಜೂ.5 ರಿಂದ 7ರವರೆಗೆ ನಡೆಯಬೇಕಿದ್ದ ಕಾರ ಹುಣಿಮೆ ಕೊರೊನಾದಿಂದಾಗಿ ಸರಳವಾಗಿ ಆಚರಿಸಲಾಗುತ್ತಿದೆ