ಬೆಳಗಾವಿ: ಸಿಡಿ ವಿಚಾರವಾಗಿ ಸಾರ್ವಜನಿಕವಾಗಿ ಚರ್ಚೆ ಮಾಡುವುದು ಅನಗತ್ಯ. ಇದರಿಂದ ಮೂರು ಕುಟುಂಬಗಳ ವರ್ಚಸ್ಸಿಗೆ ಹಾನಿ ಸಂಭವಿಸುತ್ತದೆ. ಈ ರೀತಿ ಚರ್ಚೆ ಮಾಡದಂತೆ ಮಾಧ್ಯಮಗಳ ಮುಖಾಂತರ ಮೂರು ಜನರಿಗೆ ಮನವಿ ಮಾಡುತ್ತೇನೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಇಂದು ಹೇಳಿದ್ದಾರೆ. ಗೋಕಾಕ್ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮನವಿ ಮಾಡಿಕೊಳ್ಳುತ್ತೇನೆ. ಮೂರು ತಿಂಗಳಲ್ಲಿ ಚುನಾವಣೆ ಇದೆ. ಈ ರೀತಿ ಸಿಡಿ ಪ್ರಕರಣ ಇಟ್ಟುಕೊಂಡು ಹೋದ್ರೆ ಮೂರು ಕುಟುಂಬಗಳಿಗೆ ಡ್ಯಾಮೇಜ್ ಆಗುತ್ತೆ. ಎಲ್ಲಾ ದೊಡ್ಡ ದೊಡ್ಡ ಫ್ಯಾಮಿಲಿ ಇರುವುದರಿಂದ ದಯಮಾಡಿ ಈ ಕೇಸ್ ಮುಂದುವರೆಸಬೇಡಿ ಎಂದರು.
ಸಿಡಿ ಪ್ರಕರಣ ಮುಂದುವರೆಸಬೇಡಿ : ನಾವು ರಾಜಕೀಯವಾಗಿ ಹೋರಾಟ ಮಾಡೋಣ. ಬಿಜೆಪಿಯಿಂದ ನಾವು ಕಾಂಗ್ರೆಸ್ನಿಂದ ನೀವು ಚುನಾವಣೆ ಎದುರಿಸಿ ಜನ ಯಾರ ಮೇಲೆ ಪ್ರೀತಿ ಇಟ್ಟಿದ್ದಾರೋ ಅವರಿಗೆ ಮತ ನೀಡುತ್ತಾರೆ. ದಯಮಾಡಿ ಸಿಡಿ ಪ್ರಕರಣ ಕೆಸರೆರಚಾಟ ಮಾಡುವುದರಿಂದ ಜಾರಕಿಹೊಳಿ ಕುಟುಂಬ, ಡಿ ಕೆ ಶಿವಕುಮಾರ್ ಕುಟುಂಬ, ಹೆಬ್ಬಾಳ್ಕರ್ ಅವರ ಕುಟುಂಬಕ್ಕೆ ಹಾನಿ ಉಂಟಾಗುತ್ತದೆ. ಬಹಳ ಜನ ಸೇರಿ ಅವರವರ ಸಾಮ್ರಾಜ್ಯ ಕಟ್ಟಿದ್ದಾರೆ. ಮೂರು ಜನ ದೊಡ್ಡವರಿದ್ದಾರೆ. ಸಿಡಿ ಪ್ರಕರಣ ಮುಂದುವರೆಸಬೇಡಿ. ಬಹಳ ಡ್ಯಾಮೇಜ್ ಆಗುತ್ತೆ. ಈ ರೀತಿ ಮಾಡಬೇಡಿ ಎಂದು ಹೇಳಿದರು.
ಇದನ್ನೂ ಓದಿ : ಸಹೋದರನ ವಿರುದ್ಧ ಸಿಡಿ ಷಡ್ಯಂತ್ರ.. ಸಿಬಿಐ ತನಿಖೆಗೆ ಎಂಎಲ್ಸಿ ಲಖನ್ ಜಾರಕಿಹೊಳಿ ಒತ್ತಾಯ
ಕೆಲವು ವಿಚಾರವನ್ನ ಮುಖ್ಯಮಂತ್ರಿ, ಗೃಹಮಂತ್ರಿ ಕರೆದ್ರೇ ಒಂದು ರೂಮ್ನಲ್ಲಿ ಕುಳಿತು ಚರ್ಚೆ ಮಾಡುತ್ತೇವೆ. ಇದನ್ನ ಸಾರ್ವಜನಿಕವಾಗಿ ಟೀಕೆ ಮಾಡುವುದನ್ನ ಮೂರು ಜನ ನಿಲ್ಲಿಸಬೇಕು. ಪಕ್ಷದಲ್ಲಿ ಈ ವಿಚಾರ ಕರೆದು ಕೇಳಿದ್ರೆ ವರಿಷ್ಠರ ಮುಂದೆ ಹೇಳುತ್ತೇವೆ. ಮೂರು ಜನ ದಯಮಾಡಿ ಇದನ್ನ ಮುಂದುವರೆಸಬೇಡಿ. ಎಲ್ಲರೂ ದೊಡ್ಡ ಮಟ್ಟಕ್ಕೆ ಬೆಳೆದಿದ್ದೀರಿ. ಇನ್ನೂ ಒಳ್ಳೆ ಮಟ್ಟಕ್ಕೆ ಬೆಳೆಯಿರಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.
ವೈಯಕ್ತಿಕವಾಗಿ ಯಾವುದೇ ಟೀಕೆ ಮಾಡುವುದು ಬೇಡ: ರಾಜಕೀಯ ಅನುಭವ ಇದ್ದವರು ಇದ್ದಾರೆ. ಈ ರೀತಿ ಮಾತಾಡೋದ್ರಿಂದ ಸಾಕಷ್ಟು ಡ್ಯಾಮೇಜ್ ಆಗುತ್ತೆ. ರಾಜಕೀಯವಾಗಿ ಮತ್ತು ಅವರ ಕುಟುಂಬಕ್ಕೂ, ಕ್ಷೇತ್ರದ ಜನರಿಗೂ ಡ್ಯಾಮೇಜ್ ಆಗುತ್ತೆ. ವೈಯಕ್ತಿಕವಾಗಿ ಯಾವುದೇ ಟೀಕೆ ಮಾಡುವುದು ಬೇಡ. ಪಕ್ಷವಾರು ಹೋರಾಟ ಮಾಡೋಣ. ನಮ್ಮನ್ನು ಸೋಲಿಸಲು ಅವರು ಬರಲಿ. ಅವರನ್ನ ಸೋಲಿಸಲು ನಾವು ಹೋಗೋಣ. ಇದನ್ನ ಬಿಟ್ಟು ಯಾರ ಬಗ್ಗೆಯೂ ವೈಯಕ್ತಿಕ ಟೀಕೆಯಿಂದ ರಾಜಕೀಯ ಮಾಡಬೇಡಿ. ಸಿಡಿ ಬಿಡುಗಡೆಯಾದಾಗ ಖಂಡಿತ ಅವರಿಗೆ ನೋವಾಗಿದೆ. ಈ ಸಂದರ್ಭದಲ್ಲಿ ನಾವು ಅವರೊಟ್ಟಿಗೆ ಇದ್ದು ಹೋರಾಟ ಮಾಡಿದ್ದೇವೆ ಎಂದು ತಿಳಿಸಿದರು.
ಸಾರ್ವಜನಿಕವಾಗಿ ಚರ್ಚೆ ಮಾಡಿ ಪ್ರಯೋಜನ ಇಲ್ಲ: ರಾಜಕೀಯ ಬೆಳೆಸೋದು, ಹಾಳು ಮಾಡುವುದು ಕ್ಷೇತ್ರದ ಜನರ ಕೈಯಲ್ಲಿ ಇರುತ್ತೆ. ರಮೇಶ್ ಜಾರಕಿಹೊಳಿಗೆ ಅನ್ಯಾಯ ಆಗಿದೆ. ತೊಂದರೆ ಆಗಿದೆ. ಏನೇ ಆದ್ರೂ ಸಾರ್ವಜನಿಕವಾಗಿ ಮಾತಾಡದೇ ಪಕ್ಷದ ವೇದಿಕೆಯಲ್ಲಿ ಕುಳಿತು ಮಾತನಾಡಿ. ನಿರ್ಣಯ ತೆಗೆದುಕೊಳ್ಳುವುದು ಒಳ್ಳೆಯದು, ನಾನು ಸಿಡಿ ಬಿಡುಗಡೆ ಆದಾಗ ಸಿಬಿಐಗೆ ನೀಡುವಂತೆ ಮನವಿ ಮಾಡಿದ್ದೆ. ಆಗ ಯಾರೂ ಕೇಳಲಿಲ್ಲ. ಈಗ ಸಾರ್ವಜನಿಕ ಚರ್ಚೆ ಮಾಡಿ ಪ್ರಯೋಜನ ಇಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ : ಸಿಡಿ ಬಾಂಬ್ ಸಿಡಿಸಿದ್ದ ಜಾರಕಿಹೊಳಿ.. ಸಿಎಂ ಜೊತೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷ