ಬೆಳಗಾವಿ: ಕೊರೊನಾ ವೈರಸ್ ಹಾವಳಿ ಪರಿಣಾಮ ಯಾವುದೋ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಅದರ ಪರಿಣಾಮ ಊಹಿಸಿಕೊಳ್ಳೋಕೆ ಕೂಡಾ ಆಗೋದಿಲ್ಲ. ಈಗ ಕೊರೊನಾ ವೈರಸ್ನಿಂದಾಗಿ ನೂರಾರು ವಿದ್ಯಾರ್ಥಿಗಳಿಗೆ ನೀಡಲಾಗ್ತಿದ್ದ ಪ್ರೋತ್ಸಾಹಧನಕ್ಕೂ ಕೂಡಾ ಬ್ರೇಕ್ ಬಿದ್ದಿದೆ.
ಕೊರೊನಾ ವೈರಸ್ ಇಲ್ಲದಿದ್ರೆ ಇಷ್ಟೊತ್ತಿಗೆ ರಾಜ್ಯದ ವಿವಿಗಳಲ್ಲಿ ಘಟಿಕೋತ್ಸವ ನಡೆದು ರ‍್ಯಾಂಕ್ ಪಡೆದಿರೋ ಪರಿಶಿಷ್ಟ ಜಾತಿಯ ನೂರಾರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಕೂಡಾ ನೀಡ್ಬೇಕಿತ್ತು. ಆದ್ರೆ ಇದ್ಯಾವುದೋ ಆಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಸಾಲಕ್ಕಾಗಿ ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡೋರ ಪರಿಸ್ಥಿತಿಯಂತೂ ಶೋಚನೀಯವಾಗಿದೆ. ಪ್ರೋತ್ಸಾಹಧನದ ಪತ್ರಗಳನ್ನು ಮನೆಗೆ ಕಳುಹಿಸಿದ್ದು, ರ‍್ಯಾಂಕ್ ಪಡೆದಿರೋ ಪ್ರಮಾಣಪತ್ರ ನೀಡಿದ್ರೆ ಮಾತ್ರ ಪ್ರೋತ್ಸಾಹ ಧನ ನೀಡ್ತೇವೆ ಎಂಬ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳ ನಿಯಮ ವಿದ್ಯಾರ್ಥಿಗಳನ್ನು ಪೇಚಿಗೆ ಸಿಲುಕಿಸಿದೆ.
ಸದ್ಯಕ್ಕೆ ಘಟಿಕೋತ್ಸವ ನಡೆಸೋ ಯಾವ ಸೂಚನೆ ಕೂಡಾ ಇಲ್ಲ. ಆದ್ರಿಂದ ಬೇರೊಂದು ಪರ್ಯಾಯ ಮಾರ್ಗ ಕಂಡುಹಿಡಿಯಬೇಕು. ಈ ಮೂಲಕ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಬೇಕು ಅನ್ನೋದು ವಿದ್ಯಾರ್ಥಿಗಳ ಆಗ್ರಹವಾಗಿದೆ.