ಬೆಳಗಾವಿ : ಜನರ ಆಸೆ, ಬಯಕೆ, ನಾನು ಸಿಎಂ ಆಗಬೇಕು ಎನ್ನುವುದು ಇದ್ದೇ ಇರುತ್ತದೆ. ಆ ವಿಚಾರ ಆಮೇಲೆ, ನಮ್ಮ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ರಾಜ್ಯದ ಜನರು ನಮಗೆ ಐದು ವರ್ಷ ಆಡಳಿತ ಮಾಡಲು ಅವಕಾಶ ಕೊಟ್ಟಿದ್ದಾರೆ. ಪಕ್ಷದ ಹೈಕಮಾಂಡ್ ಯಾವಾಗ ತೀರ್ಮಾನ ಮಾಡುತ್ತದೆಯೋ ಮಾಡಲಿ. ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮೊದಲು ರಾಜ್ಯದ ಜನರು ನಿರೀಕ್ಷೆ ಮಾಡಿದ ಹಾಗೆ ನಾವು ಆಡಳಿತ ನೀಡಬೇಕು. ಈ ವರ್ಷ ಮಳೆ ಕಡಿಮೆಯಾಗಿದೆ. ಒಂದು ದಿನ ಮಳೆ ಬರದಿದ್ದರೆ ಸರ್ಕಾರಕ್ಕೆ ಒಂದು ಸಾವಿರ ಕೋಟಿ ರೂ. ನಷ್ಟವಾಗುತ್ತದೆ. ವಿದ್ಯುತ್ ಬಿಲ್ ಕೂಡ ಹೆಚ್ಚಾಗುತ್ತದೆ.
ಆದರೆ, ನಾವು ರೈತರಿಗೆ ಕಡಿಮೆ ದರದಲ್ಲಿ ವಿದ್ಯುತ್ ನೀಡುತ್ತೇವೆ. ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಇನ್ನು ಈ ಭಾಗದಲ್ಲಿ ಮಳೆ ಬರಲಿ, ಬಾರದೇ ಇರಲಿ ಮಲಪ್ರಭಾ ನದಿ ಒಂದು ಬಿಟ್ಟರೆ ಎಲ್ಲ ಜಲಾಶಯಗಳಲ್ಲಿ ಶೇ.90ಕ್ಕೂ ಅಧಿಕ ನೀರು ಸಂಗ್ರಹವಾಗಿದೆ. ಆದರೆ, ಹಳೆ ಮೈಸೂರು ಭಾಗದವರನ್ನು ದೇವರೆ ಕಾಪಾಡಬೇಕು ಎಂದರು.
ಈ ಹಿಂದೆ ನಾನು ಇಂಧನ ಸಚಿವನಾಗಿದ್ದಾಗ ಸಾಕಷ್ಟು ಬದಲಾವಣೆ ತಂದಿದ್ದೇನೆ. ರೈತರಿಗೆ ಆರು ಗಂಟೆ ವಿದ್ಯುತ್ ಕೊಡುತ್ತಿದ್ದೆವು. ಆದರೆ, ಈಗ ನಮ್ಮ ಸರ್ಕಾರ ಮತ್ತೆ ಬಂದ ಮೇಲೆ ಏಳು ಗಂಟೆ ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾವು ಮಾತನಾಡಿ ತೀರ್ಮಾನ ಮಾಡಿದ್ದೆವು ಎಂದರು.
ರಾಜ್ಯ ಸರ್ಕಾರಕ್ಕೆ ನೀರು ಉಳಿತಾಯ ಮಾಡುವುದೇ ದೊಡ್ಡ ಸವಾಲಾಗಿದೆ. ನೀರಾವರಿ ಬಳಕೆದಾರ ಸಂಘಗಳನ್ನು ಕ್ರಿಯಾಶೀಲ ಮಾಡಿದ್ದೇನೆ. ಎತ್ತಿನಹೊಳೆ ನೀರು ತರಲು ನಿಯಮ ಮಾಡಲಾಗಿದೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರುವರೆಗೂ ನೀರು ಹೋಗಬೇಕು. ಮಧ್ಯದಲ್ಲಿ ಯಾರಾದರೂ ಪೈಪ್ ಲೈನ್ ಹಾಕಿದರೆ ಕಷ್ಟವಾಗುತ್ತದೆ. ಅದಕ್ಕಾಗಿ ಕಾನೂನು ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಕೆಶಿ ಹೇಳಿದರು.
ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಆಂತರಿಕ ಭಿನ್ನಾಭಿಪ್ರಾಯವಿದೆ ಹೊರತು ಬಹಿರಂಗ ಭಿನ್ನಾಭಿಪ್ರಾಯವಿಲ್ಲ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಆಂತರಿಕನೂ ಇಲ್ಲ, ಮತ್ತೊಂದೂ ಇಲ್ಲ. ನನಗೆ ಯಾರ ಬಗ್ಗೆಯೂ ಭಿನ್ನಾಭಿಪ್ರಾಯ ಇಲ್ಲ. ಯಾಕೆ ಭಿನ್ನಾಭಿಪ್ರಾಯ ಮಾಡಿಕೊಳ್ಳಬೇಕು ಎಂದು ಸಮಜಾಯಿಷಿ ನೀಡಿದರು.
ಗಡಿಭಾಗದ ಮರಾಠಿಗರಿಗೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸುವ ವಿಚಾರದ ಕುರಿತು ಮಾತನಾಡಿ, "ಇಂದು ಸಂಪುಟ ಸಭೆ ಇದೆ, ಪೂರ್ವನಿಯೋಜಿತ ಕಾರ್ಯಕ್ರಮ ಇದ್ದ ಹಿನ್ನೆಲೆ ಸಭೆಗೆ ನಾನು ಹೋಗುತ್ತಿಲ್ಲ. ಸಿಎಂಗೆ ಫೋನ್ ಮಾಡಿ ಈ ಬಗ್ಗೆ ತಿಳಿಸುತ್ತೇನೆ. ಸುಮ್ಮನೆ ಹೇಳಿಕೆ ನೀಡಲು ಆಗಲ್ಲ, ಮಹಾರಾಷ್ಟ್ರ ಸರ್ಕಾರದ ನಿಲುವಿನ ಬಗ್ಗೆ ನಮ್ಮ ಸರ್ಕಾರದಿಂದ ಒಟ್ಟಾರೆ ನಿರ್ಣಯ ತೆಗೆದುಕೊಳ್ಳುತ್ತೇವೆ" ಎಂದರು.
ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಳಗಾವಿಗೆ ಸ್ಥಳಾಂತರಿಸುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗಡಿ ಭಾಗವನ್ನು ಸುರಕ್ಷಿತವಾಗಿಡುವ ಉದ್ದೇಶದಿಂದಲೇ ರಾಜ್ಯದ ಎರಡನೇ ರಾಜಧಾನಿ ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಲಾಗಿದೆ. ಹಾಗಾಗಿ, ಕನ್ನಡ ನಾಡು ನುಡಿಯನ್ನು ನಾವು ಉಳಿಸುತ್ತೇವೆ, ಚಿಂತೆ ಬೇಡ ಎಂದು ಹೇಳಿದರು.
ಇನ್ನು ದೂಧಗಂಗಾ ನದಿ ತಿರುವು ಮಾಡಿ, ಇಚಲಕರಂಜಿ ಕುಡಿಯುವ ನೀರಿನ ಯೋಜನೆಗೆ ಮಹಾರಾಷ್ಟ್ರ ಸರ್ಕಾರ ಮುಂದಾಗಿರುವ ಬಗ್ಗೆ ಯಾರೂ ನನ್ನ ಜೊತೆ ಮಾತನಾಡಿಲ್ಲ, ಈ ಕುರಿತು ತಜ್ಞರ ತಂಡದ ಜೊತೆಗೆ ಮಾತನಾಡುತ್ತೇನೆ ಎಂದರು.