ಅಥಣಿ: ಸಿನಿಮೀಯ ಮಾದರಿಯಲ್ಲಿ ಸರ್ಕಾರಿ ಆಸ್ಪತ್ರೆಯಿಂದ ನವಜಾತ ಶಿಶು ಕಳ್ಳತನ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಆದರೆ, ಎರಡೂವರೆ ಗಂಟೆಯಲ್ಲಿ ಮಗುವನ್ನು ಬೆಳಗಾವಿ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ನಿನ್ನೆಯಷ್ಟೇ ಜನಿಸಿದ್ದ ನವಜಾತ ಗಂಡು ಮಗು ಪತ್ತೆ ಹಚ್ಚಿ ತಾಯಿಗೆ ಹಸ್ತಾಂತರಿಸುವಲ್ಲಿ ಅಥಣಿ ಮತ್ತು ಕಾಗವಾಡ ಪೊಲೀಸರು ಯಶಸ್ವಿಯಾಗಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಇಂದು ಬೆಳಗಿನ ಜಾವ 10.15 ಕ್ಕೆ ಸರ್ಕಾರಿ ಆಸ್ಪತ್ರೆಗೆ ನರ್ಸ್ ವೇಷಧಾರಿಯಾಗಿ ಆಸ್ಪತ್ರೆಗೆ ಆಗಮಿಸಿದ್ದ ಓರ್ವ ಮಹಿಳೆ ಮತ್ತು ಅವರ ತಂಡ ನೇರವಾಗಿ ಆಸ್ಪತ್ರೆಯ ವಾರ್ಡ್ಗೆ ತೆರಳಿ ಎಲ್ಲ ಬಾಣಂತಿಯರು ತಾಯಿ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಕೊಡಬೇಕು ಅಂತ ಹೇಳಿ ಗಮನ ಬೇರೆಡೆ ಸೆಳೆದಿದ್ದಾರೆ.
ಬಳಿಕ ಅಂಬಿಕಾ, ಅಮೀತ, ಭೋವಿ ಎಂಬ ಬಾಣಂತಿ ಮಗುವನ್ನು ತೂಕ ಮಾಡಿ ಕೊಡುವುದಾಗಿ ಹೇಳಿ ವಾರ್ಡ್ನಿಂದ ಹೊರಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅರ್ಧ ಗಂಟೆಯಾದರೂ ಮಗುವನ್ನು ಮರಳಿ ಕೊಡದೇ ಇದ್ದಾಗ ಆಸ್ಪತ್ರೆಯಲ್ಲಿ ವಿಷಯ ತಿಳಿದು ಅಥಣಿ ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು.
ಮಗು ರಕ್ಷಣೆ ಯಶಸ್ವಿ: ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದ ಅಥಣಿ ಪೊಲೀಸರು ಬೆಳಗಾವಿ ಎಸ್ಪಿ ಡಾ ಸಂಜೀವ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಅಥಣಿ ಡಿವೈಎಸ್ಪಿ ಶ್ರೀಪಾದ ಜೇಲ್ದೆ ನೇತೃತ್ವದಲ್ಲಿ, ಸಿಪಿಐ ರವೀಂದ್ರ ನಾಯ್ಕೋಡಿ ಮತ್ತು ಪಿಎಸ್ಐ ಶಿವಶಂಕರ ಮುಕ್ರಿ ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ತನಿಖೆ ನಡೆಸಿದ್ದು, ಮಗುವನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಮೈಶಾಳ ಗ್ರಾಮದ ಮಹಿಳೆಯೊಬ್ಬಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
ಇನ್ನು ಮಗು ನಾಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಆಸ್ಪತ್ರೆಯಲ್ಲಿ ಜಮಾವಣೆಗೊಂಡಿದ್ದು ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಅದಲ್ಲದೇ ಮಗು ಪತ್ತೆಯಾದ ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟಿದ್ದು, ಪತ್ರಿಕಾಗೋಷ್ಠಿ ನಡೆಸಿದ ಬೆಳಗಾವಿ ಎಸ್ಪಿ ಸಂಜೀವ ಪಾಟೀಲ್, ಅಥಣಿ ಮತ್ತು ಕಾಗವಾಡ ಪೊಲೀಸರ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಓದಿ: ಮೃತದೇಹದ ಮುಖ ಮೂಗನ್ನೂ ಬಿಡದ ಇಲಿಗಳು.. ಇದು ಶವಾಗಾರದ ದುರಾವಸ್ಥೆ!