ಬೆಳಗಾವಿ: ಹೊಸ ವರ್ಷಕ್ಕೆ ಕ್ಷಣಗಣನೆ ಶುರುವಾಗಿದ್ದು, ಕುಂದಾನಗರಿ ಬೆಳಗಾವಿ ಸಂಭ್ರಮಾಚರಣೆಗೆ ಸನ್ನದ್ಧಗೊಂಡಿದೆ. ಹೊಸ ವರ್ಷದ ಸ್ವಾಗತಕ್ಕೂ ಮುನ್ನ ದಹಿಸುವ ತರಹೇವಾರಿ ಓಲ್ಡ್ ಮ್ಯಾನ್ ಪ್ರತಿಕೃತಿಗಳು ಎಲ್ಲರನ್ನೂ ಕೈಬೀಸಿ ಕರೆಯುತ್ತಿವೆ. ಆ ಕುರಿತ ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ.
ಓಲ್ಡ್‌ಮ್ಯಾನ್ ಪ್ರತಿಕೃತಿ ಸಿದ್ಧತೆ ಹೇಗೆ?: ಹಾಲಿವುಡ್ ಹಿರೋ ಜಾನಿ ಡೆಫ್, ಪೀಕ ಬ್ಲೆಂಡರ್ಸ್, ಮೋಟು ಪತ್ಲು, ಆನಿಮಲ್ ಸಿನಿಮಾದ ರಣಬೀರ ಕಪೂರ್, ಜೋಕರ್, ಭೂತದ ಮಾದರಿ ಸೇರಿದಂತೆ 5 ರಿಂದ 25 ಅಡಿ ಗಾತ್ರದ ವೆರೈಟಿ ವೆರೈಟಿ ಓಲ್ಡ್ ಮ್ಯಾನ್ ಗಳು ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಗಮನ ಸೆಳೆಯುತ್ತಿವೆ. ಅಲ್ಲಿ ಬ್ರಿಟಿಷರ ಕಾಲದಿಂದ ಈ ಆಚರಣೆ ನಡೆದುಕೊಂಡು ಬಂದಿದೆ. ಒಣ ಹುಲ್ಲು, ಬಿದಿರಿನ ಬೊಂಬು, ಹಳೆ ಪೇಪರ್, ಕಲರ್ ಪೇಪರ್, ಹಲವು ರೀತಿಯ ಬಣ್ಣಗಳಿಂದ ಈ ಓಲ್ಡ್‌ಮ್ಯಾನ್ ಪ್ರತಿಕೃತಿಯನ್ನು ಸಿದ್ಧಪಡಿಸಲಾಗುತ್ತದೆ.
ಪ್ರತಿಕೃತಿ ದಹಿಸುವ ಆಚರಣೆ : ಬೆಳಗಾವಿ ನಗರದ ಬಹುತೇಕ ಬಡಾವಣೆಗಳ ಗಲ್ಲಿಗಳಲ್ಲಿ ‘ಓಲ್ಡ್ ಮ್ಯಾನ್’ ಪ್ರತಿಕೃತಿ ದಹಿಸುವುದು ಒಂದು ಸಂಸ್ಕೃತಿಯಾಗಿ ಮಾರ್ಪಟ್ಟಿದೆ. ವಿಭಿನ್ನ ಓಲ್ಡ್‌ಮ್ಯಾನ್‌ಗಳ ಪ್ರತಿಕೃತಿಗಳನ್ನು ಸುಡಲಾಗುತ್ತದೆ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ಹೊಸ ಆಶಯಗಳೊಂದಿಗೆ ಮುಂದುವರಿಯಬೇಕು. ಕಹಿ ಘಟನೆಗಳನ್ನು ಮರೆತು ಮುನ್ನುಗ್ಗಬೇಕು. ಹಳೆಯದನ್ನು ಸುಟ್ಟು, ಹೊಸ ಹುಟ್ಟಿಗೆ ಮುನ್ನುಡಿ ಬರೆಯಬೇಕು ಎನ್ನುವುದು ಈ ಆಚರಣೆ ಉದ್ದೇಶ. ಆಯಾ ಗಲ್ಲಿಯ ಅಥವಾ ಸ್ಥಳೀಯ ಮಕ್ಕಳು, ಯುವಕರು ಕೂಡಿಕೊಂಡು ಹಣ ಸಂಗ್ರಹಿಸಿ ತಮ್ಮ ಇಷ್ಟದ ಓಲ್ಡ್ ಮ್ಯಾನ್ ಗಳನ್ನು ತಂದು ರಾತ್ರಿ 12 ಗಂಟೆ ಸುಮಾರಿಗೆ ದಹಿಸಿ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲಿದ್ದಾರೆ.
ಈ ವೃತ್ತಿ ಆರ್ಥಿಕವಾಗಿ ಅನುಕೂಲ : ಕ್ಯಾಂಪ್ ಪ್ರದೇಶದಲ್ಲಿ ಓಲ್ಡ್ ಮ್ಯಾನ್ ಪ್ರತಿಕೃತಿ ಮಾರಾಟ ಮಾಡುತ್ತಿದ್ದ ಜ್ಯೋತಿ ಕಾಂಬಳೆ ಎಂಬುವರು ಮಾತನಾಡಿ, ನಮ್ಮ ತಂದೆಯವರ ಕಾಲದಿಂದಲೂ ಈ ವೃತ್ತಿ ಮಾಡಿಕೊಂಡು ಬಂದಿದ್ದೇವೆ. ಮನೆಯವರೆಲ್ಲ ಕೂಡಿಕೊಂಡು ಪ್ರತಿಕೃತಿ ತಯಾರಿಸುತ್ತೇವೆ. ಈಗಿನ ಟ್ರೆಂಡ್ಗೆ ತಕ್ಕಂತೆ ಮಾಡುತ್ತಿದ್ದೇವೆ. ಇದರಿಂದ ನಮ್ಮ ಕುಟುಂಬಕ್ಕೆ ಆರ್ಥಿಕವಾಗಿ ತುಂಬಾ ಅನುಕೂಲ ಆಗುತ್ತಿದೆ ಎಂದರು.
ಓಲ್ಡ್ ಮ್ಯಾನ್ ಖರೀದಿಗೆ ಬಂದಿದ್ದ ದತ್ತಾ ಬಿಲಾವರ್ ಈಟಿವಿ ಭಾರತದೊಂದಿಗೆ ಮಾತನಾಡಿ, ಪ್ರತಿವರ್ಷವೂ ಓಲ್ಡ್ ಮ್ಯಾನ್ ದಹಿಸಿ, ಊಟ ಮಾಡಿ, ಹಾಡುಗಳಿಗೆ ಭರ್ಜರಿ ಹೆಜ್ಜೆ ಹಾಕಿ ಹೊಸ ವರ್ಷವನ್ನು ವೆಲಕಮ್ ಮಾಡುತ್ತೇವೆ ಎಂದರು.
ಒಟ್ಟಿನಲ್ಲಿ ಡಿಸೆಂಬರ್ 31ರ ಸಂಜೆಯಿಂದ ಆರಂಭಗೊಳ್ಳುವ ಹೊಸ ವರ್ಷಾಚರಣೆಯ ಚಟುವಟಿಕೆಗಳು ಮಧ್ಯರಾತ್ರಿ ಹಾಗೂ ಕೆಲವೆಡೆ ಬೆಳಗಿನ ಜಾವದವರೆಗೆ ಮುಂದುವರಿಯಲಿವೆ. ಓಲ್ಡ್‌ಮ್ಯಾನ್ ದಹಿಸುವ ವೇಳೆ ಹಿರಿಯರು, ಕಿರಿಯರೆನ್ನದೇ ಎಲ್ಲರೂ ಭಾಗಿಯಾಗಿ ಸಂಭ್ರಮಿಸುತ್ತಾರೆ.
ಇದನ್ನೂಓದಿ:ಹೊಸ ವರ್ಷಾಚರಣೆಗೆ ಬೆಂಗಳೂರು ರೆಡಿ: ನಗರದ ಹಲವೆಡೆ ಭದ್ರತೆ ಬಿಗಿ