ಚಿಕ್ಕೋಡಿ: ಕಳೆದ ವರ್ಷ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಪಡೆದಿದ್ದ 3ನೇ ಸ್ಥಾನವನ್ನು ಅಳಿಸಿ ಈ ಬಾರಿ 1ನೇ ಸ್ಥಾನ ಅಲಂಕರಿಸಲು ಹಲವಾರು ಯೋಜನೆಗಳನ್ನು ತರಲಾಗಿದೆ. ಜೊತೆಗೆ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರು ಅವಿನಾಭಾವ ಸಂಬಂಧದಿಂದ ರಾತ್ರಿ ಕೂಡ ಶಿಕ್ಷಣ ನೀಡತ್ತಿದ್ದಾರೆ.
ಈಟಿವಿ ಭಾರತ್ ಜೊತೆ ಮಾತನಾಡಿದ ಚಿಕ್ಕೋಡಿ ಜಿಲ್ಲಾ ಡಿಡಿಪಿಐ ದಾಸರ, ನಮ್ಮ ಶೈಕ್ಷಣಿಕ ಜಿಲ್ಲೆಯನ್ನು ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೆ ತರಲು ಹಲವಾರು ಯೋಜನೆಗಳನ್ನು ಆಯೋಜನೆ ಮಾಡಿಕೊಳ್ಳಲಾಗಿದೆ. ಆ ಯೋಜನೆಗಳೆಲ್ಲವು ಈಗ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಮುಂಬರುವ ಪರೀಕ್ಷೆಗೆ ವಿದ್ಯಾರ್ಥಿಗಳು ತಯಾರಾಗಿದ್ದಾರೆ.
ಈ ಬಾರಿಯ ಯೋಜನೆಗಳು :
ದತ್ತು ಸ್ವೀಕಾರ :
ಶಾಲೆಯ ಒಟ್ಟು ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ಅವರನ್ನು ವಿಭಾಗಿಸಿ ಎಲ್ಲಾ ಶಿಕ್ಷಕರಿಗೂ ಇಂತಿಷ್ಟು ವಿದ್ಯಾರ್ಥಿಳೆಂದು ದತ್ತು ನೀಡುವ ವ್ಯವಸ್ಥೆ ಜಾರಿಗೊಳಿಸಿದ್ದು, ಆಯಾ ಶಿಕ್ಷಕರು ಅವರ ಶೈಕ್ಷಣಿಕ ಪ್ರಗತಿಯ ಬಗ್ಗೆ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ. ಇದೇ ರೀತಿ ಚೆನ್ನಾಗಿ ಓದುವ ವಿದ್ಯಾರ್ಥಿಗಳ ಜತೆ ಸಾಧಾರಣಾ ಮತ್ತು ಹಿಂದುಳಿದ ವಿದ್ಯಾರ್ಥಿಗಳನ್ನು ಓದಲು ಬಿಡುತ್ತಾರೆ. ಇದರಿಂದಾಗಿ ಸಾಧಾರಣ ವಿದ್ಯಾರ್ಥಿ ಉತ್ತಮವಾಗಿ, ಹಿಂದುಳಿದ ವಿದ್ಯಾರ್ಥಿ ಪಾಸಿಂಗ್ ವಿದ್ಯಾರ್ಥಿಯಾಗಲು ಸಹಕಾರಿಯಾಗುತ್ತದೆ.
ಪಾಸಿಂಗ್ ಪ್ಯಾಕೇಜ್ :
ಕಿರು ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆ ಎಲ್ಲವುಗಳಲ್ಲಿ ಅತ್ಯಂತ ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಗಳ ಪಟ್ಟಿ ಮಾಡಿ ಅವರಿಗೆ ಪಾಸಾಗುವಷ್ಟು ಅಂಕ ಬರುವಂತೆ ತಯಾರು ಮಾಡುವ ವ್ಯವಸ್ಥೆಯೇ ಪಾಸಿಂಗ್ ಪ್ಯಾಕೇಜ್ ಆಗಿದೆ. ಇದು ಚಿಕ್ಕೋಡಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ನಡೆಯುತ್ತಿದ್ದು, ಇದಕ್ಕೆ ವಿಶೇಷವಾದ ಒತ್ತು ನೀಡಲಾಗಿದೆ. ಇದರಂತೆ ಚೆನ್ನಾಗಿ ಓದುವ ವಿದ್ಯಾರ್ಥಿಗಳಿಗೂ ಇನ್ನಷ್ಟು ಉತ್ತೇಜನ ನೀಡಿ ಟಾಪರ್ ಆಗಲು ಪ್ರೋತ್ಸಾಹ ನೀಡಲಾಗುತ್ತದೆ.
ಮನೆ ಮನೆ ಭೇಟಿ :
ಮಕ್ಕಳು ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಲು ಪ್ರೋತ್ಸಾಹಿಸುವ, ಶಾಲೆಗೆ ನಿರಂತರವಾಗಿ ಬರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪಾಲಕರಿಗೆ ತಿಳಿಸುವ ಸಲುವಾಗಿ ಮನೆಮನೆ ಭೇಟಿ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಏಕೆಂದರೆ ಸರಕಾರಿ ಶಾಲೆಗಳಿಗೆ ಬರುವ ಬಹುತೇಕ ವಿದ್ಯಾರ್ಥಿಗಳು ಬಡತನದ ಹಿನ್ನೆಲೆಯವರಾಗಿದ್ದು, ಪಾಲಕರು ಕೂಲಿ ಕಾರ್ಮಿಕರೇ ಆಗಿರುತ್ತಾರೆ. ತಾಯಂದಿರು ಸಭೆಗೆ ಬರಲು ಆಗದ ಕಾರಣ ಶಿಕ್ಷಕರೇ ಮನೆ ಮನೆ ಭೇಟಿ ಮಾಡಿ ಅವರಿಗೆ ತಿಳಿಹೇಳುವ ಜೊತೆಗೆ ಮಕ್ಕಳಿಗೆ ಓದಿನಲ್ಲಿರುವ ಸಮಸ್ಯೆಗಳನ್ನೂ ಪರಿಹರಿಸುವರು.
ವಿಶೇಷ ತರಗತಿ :
ಶಾಲಾ ಅವಧಿ ಹೊರತುಪಡಿಸಿ ಬೆಳಗ್ಗೆ ಒಂದು ಗಂಟೆ, ಸಂಜೆ ಒಂದು ಗಂಟೆ ವಿಶೆಷ ತರಗತಿ ನಡೆಸಲು ಇಲಾಖೆ ಸೂಚಿಸಿದ್ದು, ಇದರಂತೆ ಎಲ್ಲಾ ಪ್ರೌಢ ಶಾಲೆಗಳಲ್ಲೂ ತರಗತಿಗಳು ನಡೆಯುತ್ತಿವೆ. ಇವೆಲ್ಲವುಗಳ ಉದ್ದೇಶವೊಂದೇ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವುದೇ ಆಗಿದೆ. ಇಲಾಖೆ ಶಿಕ್ಷಕರ ಜತೆಗೆ ಪಾಲಕರೂ ಮಕ್ಕಳ ಶೈಕ್ಷಣಿಕ ಪ್ರಗತಿಯ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದರೆ ಫಲಿತಾಂಶ ಸುಧಾರಣೆ ಆಗಲಿದೆ ಎನ್ನುವುದು ಶಿಕ್ಷಣ ತಜ್ಞರ ಆಭಿಪ್ರಾಯವಾಗಿದೆ.
ಈ ಬಾರಿ ನೂತನ ಯೋಜನೆ ಸಕ್ಸಸ್ :
ಈ ಬಾರಿ ಪರೀಕ್ಷೆ ಬರೆಯುವ 40,020 ವಿದ್ಯಾರ್ಥಿಗಳ ಶಾಲೆಗಳಲ್ಲಿ ಇದೇ ಮೊದಲ ಬಾರಿಗೆ ಮುಖ್ಯ ಶಿಕ್ಷಕರು ಬೆಳಗಿನ ಜಾವ ಎದ್ದು ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಮೊಬೈಲ್ ಫೋನ್ ಮೂಲಕ ಕರೆ ಮಾಡಿ ಬೆಳಗಿನ ಓದಿಗೆ ಅಣಿಗೊಳಿಸುವ ಕೆಲಸ ನಿರ್ವಹಿಸುತ್ತಿದ್ದಾರೆ. ಮನೆಯ ತಂದೆ-ತಾಯಿ ತಮ್ಮ ಮಗ, ಮಗಳು ಓದುತ್ತಿದ್ದಾರೆಂದು ನಿತ್ಯವೂ ಖಾತರಿ ಮಾಡಬೇಕು. ಇನ್ನೂ ಮುಖ್ಯವಾದ ವಿಚಾರದವೆಂರೆ ಒಂದು ಊರಿನಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ, ಆ ಊರಿನ ವಿದ್ಯಾವಂತರ ಮಾರ್ಗದರ್ಶನದಲ್ಲಿ ಓದಿಸಲು ಅಣಿಗೊಳಿಸಲಾಗಿದೆ.
ವಿದ್ಯಾರ್ಥಿಗಳನ್ನು ಮೂರು ವಿಭಾಗಗಳಾಗಿ ವಿಭಾಗಿಸಿ ಬೆಲ್ಟ್ ನೀಡಲಾಗಿದೆ.
* ಕಲಿಕೆಯಲ್ಲಿ ಹಿಂದೆ ಉಳಿದ ವಿದ್ಯಾರ್ಥಿಗಳಿಗೆ ರೆಡ್ ಬೆಲ್ಟ್
* ಸಲಿಸಾಗಿ ಪಾಸಾಗುವ ವಿದ್ಯಾರ್ಥಿಗಳಿಗೆ ಬ್ಲೂ ಬೆಲ್ಟ್
* ಡಿಸ್ಟಿಂಕ್ಷನ್ನಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಗ್ರೀನ್ ಬೆಲ್ಟ್. ಹೀಗೆ ಒಟ್ಟು ಮೂರು ವಿಭಾಗಗಳಾಗಿ ವಿಂಗಡಿಸಿ ಬೆಲ್ಟ್ಗಳನ್ನು ನೀಡಲಾಗಿದೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು - 31,739. ಇಂಗ್ಲೀಷ್ ಮಾಧ್ಯಮ ವಿದ್ಯಾರ್ಥಿಗಳು - 2,949. ಉರ್ದು ಮಾಧ್ಯಮ ವಿದ್ಯಾರ್ಥಿಗಳು - 1,497. ಮರಾಠಿ ಮಾಧ್ಯಮ ವಿದ್ಯಾರ್ಥಿಗಳು - 3,835 ಹೀಗೆ ಒಟ್ಟು 40,020 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದಾರೆ.
ಒಟ್ಟು 130 ಪರೀಕ್ಷಾ ಕೇಂದ್ರಗಳಲ್ಲಿ 4 ಸೂಕ್ಷ್ಮ ಕೇಂದ್ರಗಳು ಹಾಗೂ 126 ಸಾಮಾನ್ಯ ಕೇಂದ್ರಗಳನ್ನು ಒಳಗೊಂಡಿವೆ. ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು 533 ಪ್ರೌಢ ಶಾಲೆಗಳನ್ನು ಒಳಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.