ಬೆಳಗಾವಿ: ಹಿರೇಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಕ್ಷುಲ್ಲಕ ರಾಜಕಾರಣ ಮಾಡ್ತಿದ್ದಾರೆ ಎಂಬ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಎರಡು ಹತ್ಯೆಗಳಾಗಿವೆ. ಆ ಕುರಿತು ಸರ್ಕಾರ ವಿಚಾರ ಮಾಡಬೇಕಿದೆ ಎಂದರು.
ಜೈನ ಮುನಿ ಕೊಲೆ ಪ್ರಕರಣ ಹಿನ್ನೆಲೆ ಇಂದು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕೊಲೆ ಖಂಡನೀಯ. ತನಿಖೆ ಪಾರದರ್ಶಕವಾಗಿ ನಡೆಯಬೇಕು. ಹತ್ಯೆಯ ಹಿಂದೆ ಯಾರ್‍ಯಾರ ಕೈವಾಡ ಇದೆ ಅನ್ನುವುದು ಹೊರಬರಬೇಕು. ಕಾಂಗ್ರೆಸ್ ನವರು ಒಂದು ಪ್ರಶ್ನೆ ಎತ್ತಿದ್ದಾರೆ. ಎರಡು ತಿಂಗಳ ಹಿಂದೆ ಪೊಲೀಸರ ಮೇಲೆ ಇದ್ದ ನಂಬಿಕೆ ಈಗ ಇಲ್ಲವೇ ಎಂದು ನಮ್ಮನ್ನು ಕೇಳಿದ್ದಾರೆ. ಪ್ರವೀಣ್ ನೆಟ್ಟಾರು, ಹರ್ಷ ಕೊಲೆ ಕೇಸ್ಗಳನ್ನು ನಮ್ಮ ಸರ್ಕಾರ ಎನ್ಐಎಗೆ ಒಪ್ಪಿಸಿತ್ತು ಎಂದು ಕಟೀಲ್ ತಿರುಗೇಟು ನೀಡಿದರು.
ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇಲ್ಲದೇ ಇರುವುದಕ್ಕೆ ಕೊಟ್ಟಿದ್ದಲ್ಲ, ತನಿಖೆ ಸಮಗ್ರವಾಗಿರಲಿ, ಅದರ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿಯುವುದಕ್ಕೆ ಎನ್ಐಎಗೆ ಕೊಡಲಾಗಿತ್ತು. ಹೊರ ರಾಜ್ಯದ ಯಾರಾದಾದರೂ ಕೈವಾಡದಿಂದ ಹತ್ಯೆ ಆಗಿರಬಹುದು ಅನ್ನೋ ಶಂಕೆ ಇರುವ ಹಿನ್ನೆಲೆಯಲ್ಲಿ ಎನ್ಐಎಗೆ ಕೊಡಲಾಗಿತ್ತು. ಜೈನಮುನಿ ಅವರ ಹತ್ಯೆ ಇಡೀ ರಾಜ್ಯವೇ ನಾಚಿಕೆ ಪಡುವ ಸಂಗತಿಯಾಗಿದೆ. ಹಾಗಾಗಿ ಈ ಹತ್ಯೆಯಲ್ಲಿ ವ್ಯವಹಾರದ ಕುರಿತು ಸಮಗ್ರ ತನಿಖೆ ಆಗಲಿ. ಈ ಕುರಿತಾಗಿ ಸಮಗ್ರ ಮಾಹಿತಿ ಪಡೆಯಲು ನಮ್ಮ ನಿಯೋಗ ಇಲ್ಲಿಗೆ ಬಂದಿದೆ ಎಂದು ಕಟೀಲ್ ಹೇಳಿದರು.
ಸತ್ಯಶೋಧನಾ ಸಮಿತಿ ಮಾಡಿಕೊಂಡು ಸ್ಥಳಕ್ಕೆ ಭೇಟಿ ಕೊಡುತ್ತಿದ್ದೇವೆ. ಕ್ಷೇತ್ರಕ್ಕೆ ಹೋಗಿ ಪರಿಶೀಲಿಸಿ, ಜನರ ಅಭಿಪ್ರಾಯ ಕೇಳಿ ತನಿಖಾ ವರದಿ ಪಡೆದುಕೊಳ್ಳುತ್ತೇವೆ. ಸರ್ಕಾರ ಏನು ಹೇಳುತ್ತೆ, ಪೊಲೀಸರು ಏನು ಹೇಳ್ತಾರೆ, ಅಲ್ಲಿಯ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡುತ್ತೇವೆ. ಪೊಲೀಸರು ಹೇಳಿದಂತೆ ಕೊಲೆ ಆಗಿದ್ದರೆ ಸಮಗ್ರ ತನಿಖೆ ನಡೆಯಲಿ. ಒಂದು ವೇಳೆ ಬೇರೆ ಏನಾದರೂ ಇದ್ದರೆ, ಜನರ ಭಾವನೆಗೆ ಧಕ್ಕೆ ಆಗಬಾರದು ಎಂದು ಕಟೀಲ್ ಹೇಳಿದರು.
ಕಾಂಗ್ರೆಸ್ ದೇಶವಿರೋಧಿ ಚಟುವಟಿಕೆ ನಡೆಸುವವರ ಪರವಾಗಿ ಇದೆ, ದೇಶಭಕ್ತರ ವಿರುದ್ಧ ಕೇಸ್ ಹಾಕಲಾಗುತ್ತಿದೆ. ಎಲ್ಲ ವಿಷಯದಲ್ಲೂ ದ್ವೇಷದ ರಾಜಕಾರಣ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದಾಗ ಕೆಲವರು ಹೀಗೆ ಮಾಡ್ತಾರೆ. ದ್ವೇಷದ ರಾಜಕಾರಣ ಜಾಸ್ತಿ ಆಗುತ್ತದೆ. ಪೊಲೀಸ್ ಇಲಾಖೆ ಅವರ ಕೈಯಲ್ಲಿ ಇರುವಾಗ ಪೊಲೀಸರಿಗೆ ಹೆಚ್ಚಿನ ಒತ್ತಡ ಇರುತ್ತೆ. ಹಾಗಾಗಿ ಪಾರದರ್ಶಕವಾಗಿ ತನಿಖೆ ನಡೆಸಲು ಆಗೋದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ದೂರಿದರು.
ಇದನ್ನೂ ಓದಿ: ಜೈನ ಮುನಿ ಹತ್ಯೆ: ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಿ- ಪ್ರಮೋದ್ ಮುತಾಲಿಕ್