ಬೆಳಗಾವಿ: ಪ್ರೌಢಶಾಲೆಗಳು ಇಂದಿನಿಂದ ಪುನರಾರಂಭವಾಗಿವೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಆಗಮಿಸುತ್ತಿದ್ದಾರೆ. ಬೆಳಗಾವಿಯ ಅಂಜುಮನ್ ಶಾಲೆಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದು ಕಂಡುಬಂತು.
ಅಂಜುಮನ್ ಶಾಲೆಯ ಮುಂದೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಒಂದು ಡಿಎಆರ್ ತುಕಡಿ, ಓರ್ವ ಸಿಪಿಐ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ. ಡಿಸಿಪಿ ರವೀಂದ್ರ ಗಡಾಡಿ ಮತ್ತು ಎಸಿಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸಿಟಿ ರೌಂಡ್ಸ್ ಹಾಕುತ್ತಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಪಿ ರವೀಂದ್ರ ಗಡಾಡಿ, 'ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನಿನ್ನೆ(ಭಾನುವಾರ) ಶಾಂತಿ ಸಭೆ ಮಾಡಲಾಗಿದೆ. ಇಂದು ಶಾಲೆಗಳು ಆರಂಭವಾಗಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಶಾಲೆಗಳ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಹೊರಗಿನಿಂದ ಬೇರೆ ಯಾರೂ ಶಾಲೆಗಳಿಗೆ ಬಾರದಂತೆ ಎಚ್ಚರಿಕೆ ನೀಡಿದ್ದೇವೆ. ನಗರದ ಎಲ್ಲ ಶಾಲಾ-ಕಾಲೇಜುಗಳ ಎದುರು ನಿಗಾವಹಿಸಲಾಗಿದೆ' ಎಂದರು.
'ಮಾಸ್ಕ್ ಬೇಕಾದ್ರೆ ತೆಗೆಯುತ್ತೇವೆ, ಹಿಜಾಬ್ ತೆಗೆಯಲ್ಲ': ಹಿಜಾಬ್ ವಿಚಾರವಾಗಿ ಶಾಲಾ ಸಿಬ್ಬಂದಿ ಜತೆಗೆ ವಿದ್ಯಾರ್ಥಿನಿಯರ ಪೋಷಕರು ವಾಗ್ವಾದ ನಡೆಸಿದ ಘಟನೆ ಬೆಳಗಾವಿಯ ಸರ್ದಾರ್ ಶಾಲಾ ಆವರಣದಲ್ಲಿ ನಡೆದಿದೆ. ಶಾಲೆಯ ವೇಳೆ ಗೇಟ್ ಬಳಿ ನಿಂತಿರುವ ಶಾಲಾ ಸಿಬ್ಬಂದಿ ಹಿಜಾಬ್ ತೆಗೆದು ಒಳ ಬರುವಂತೆ ಮನವಿ ಮಾಡಿದರು. ಈ ವೇಳೆ ಸಿಬ್ಬಂದಿ ಜತೆಗೆ ವಾಗ್ವಾದಕ್ಕಿಳಿದ ಪೋಷಕರು, 'ಮಕ್ಕಳು ಧರಿಸಿರುವ ಮಾಸ್ಕ್ ತೆಗೆಸುತ್ತೇವೆಯೇ ಹೊರತು ಹಿಜಾಬ್ ತೆಗೆಯಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಿಜಾಬ್-ಕೇಸರಿ ಶಾಲು ವಿವಾದದ ನಡುವೆ ರಾಜ್ಯದಲ್ಲಿ 9, 10ನೇ ತರಗತಿ ಆರಂಭ