ಚಿಕ್ಕೋಡಿ : ಧರ್ಮ ಬೇಧದ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಜನರ ನಡುವೆ ವೃತ್ತಿಯಲ್ಲಿ ಶಿಕ್ಷಕರಾಗಿ, ಪ್ರವೃತ್ತಿಯಲ್ಲಿ ಗಣೇಶನ ಮೂರ್ತಿ ತಯಾರಕರಾಗಿ ಗಡಿ ಜಿಲ್ಲೆಯ ಮುಸ್ಲಿಂ ಶಿಕ್ಷಕರೊಬ್ಬರು ಹಿಂದೂ-ಮುಸ್ಲಿಂ ಭಾವೈಕ್ಯತೆಗೂ ಶ್ರಮಿಸುತ್ತಿದ್ದಾರೆ.
ಬಣ್ಣ-ಬಣ್ಣದ ಗಣೇಶ ಮೂರ್ತಿಗಳು, ಒಂದೆಡೆ ತಲೆ ಮೇಲೆ ಟೋಪಿ ಹಾಕಿಕೊಂಡು ವಿಘ್ನೇಶ್ವರನ ಮೂರ್ತಿಗೆ ಫೈನಲ್ ಟಚ್ ನೀಡುತ್ತಿರುವ ಕುಟುಂಬಸ್ಥರು. ಈ ದೃಶ್ಯ ಕಂಡು ಬಂದಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಗ್ರಾಮದ ಅಲ್ಲಾಭಕ್ಷ ಜಮಾದಾರ್ ಎಂಬ ಮುಸ್ಲಿಂ ಶಿಕ್ಷಕನ ಮನೆಯಲ್ಲಿ.
ಜಮಾದಾರ್ ಕುಟುಂಬ ಕಳೆದ 80 ವರ್ಷಗಳಿಂದ ಪ್ರತಿ ವರ್ಷ ನೂರಾರು ಗಣಪತಿಮೂರ್ತಿ ತಯಾರಿಸಿ ಜನರಿಗೆ ಮಾರುವ ಕಾಯಕದಲ್ಲಿ ತೊಡಗಿಸಿಕೊಂಡಿದೆ. ಈ ಮೂಲಕ ಹಿಂದೂ-ಮುಸ್ಲಿಂ ಧರ್ಮದ ನಡುವೆ ಕೋಮು ಸೌಹಾರ್ದತೆ ಬೆಳೆಸುತ್ತಿದ್ದಾರೆ.
ಗಣೇಶ ಚತುರ್ಥಿ ಬರುವ ಎರಡು ತಿಂಗಳು ಮುಂಚೆಯೇ ಜಮಾದಾರ್ ಕುಟುಂಬಸ್ಥರು ಗಣೇಶ ಮೂರ್ತಿ ತಯಾರಿಸುವ ಕೆಲಸ ಶುರು ಮಾಡುತ್ತಾರೆ. ಒಬ್ಬರು ಮಣ್ಣು ಹದ ಮಾಡಿದರೆ, ಇನ್ನೊಬ್ಬರು ಮೂರ್ತಿಗೆ ಬೇಕಾದ ಸೊಂಡಿಲು, ಕೈ ಹಾಗೂ ಕಿರೀಟ ರಚಿಸುತ್ತಾರೆ. ಮನೆಯ ಹೆಣ್ಣು ಮಕ್ಕಳೂ ಸಹ ಈ ಪ್ರಕ್ರಿಯೆಯಲ್ಲಿ ಕೈಜೋಡಿಸುತ್ತಾರೆ. ಪ್ರಸಕ್ತ ವರ್ಷದಲ್ಲಿ ಜಮಾದಾರ್ ಕುಟುಂಬ ಸುಮಾರು 250 ರಿಂದ 300 ಗಣೇಶ ಮೂರ್ತಿಗಳನ್ನು ತಯಾರಿಸಿದೆ.
ಮುಸ್ಲಿಂ ಕುಟುಂಬವೊಂದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ಕೋಮು ಸೌಹಾರ್ದ ಸಂದೇಶ ಸಾರುತ್ತಿರುವುದಕ್ಕೆ ಮಾಂಜರಿವಾಡಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಜಮಾದಾರ್ ಕುಟುಂಬ ತಯಾರಿಸುವ ಗಣಪತಿ ಮೂರ್ತಿಗಳನ್ನು ಚಿಕ್ಕೋಡಿ ತಾಲೂಕಿನ ಮಾಂಜರಿ, ಯಡೂರ, ಯಡೂರವಾಡಿ, ಶಿರಗುಪ್ಪಿ ಸೇರಿ ಸುತ್ತಮುತ್ತಲಿನ ಹಳ್ಳಿಯ ಭಕ್ತರು ಕೊಂಡೊಯ್ಯುತ್ತಾರೆ. ಜಾತಿ ಧರ್ಮ ಎಂದು ಬಡಿದಾಡುವವರ ಮಧ್ಯೆ ಜಮಾದಾರ್ ಕುಟುಂಬ ಗಣೇಶ ಮೂರ್ತಿ ತಯಾರಿಸಿ ಕೋಮು ಸೌಹಾರ್ದತೆ ಮೆರೆಯುತ್ತಿರುವುದು ಶ್ಲಾಘನೀಯ.