ಬೆಳಗಾವಿ: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಆಟೋ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳಗಾವಿಯ ಉಜ್ವಲ ನಗರದ ಇಬ್ರಾಹಿಂ ಸಯ್ಯದ್, ಮಹ್ಮದ್ ಮನ್ನೂರಕರ, ಗಾಂಧಿನಗರದ ಉಲ್ಮಾನ್ ಯರಗಟ್ಟಿ ಬಂಧಿತರು.
ಜ. 6 ರಂದು ಉಜ್ವಲ ನಗರದ ಆಟೋ ಚಾಲಕ ನೊಹಾನ್ ಧಾರವಾಡಕರ್ (23) ಎಂಬಾತನನ್ನು ಕೊಲೆ ಮಾಡಲಾಗಿತ್ತು. ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದ ಪಾಳುಬಿದ್ದ ಮನೆಯ ಶೌಚಾಲಯದಲ್ಲಿ ಜ. 9ರಂದು ಶವ ಪತ್ತೆಯಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆಟೋ ಚಾಲಕ ನೊಹಾನ್ ಹಾಗೂ ಕೊಲೆಯ ಆರೋಪಿಗಳು ಸ್ನೇಹಿತರಾಗಿದ್ದರು ಎಂದು ತಿಳಿದುಬಂದಿದೆ. ಇವರೆಲ್ಲಾ ಆಗಾಗ್ಗೆ ಜೊತೆಗೂಡಿ ಪಾರ್ಟಿಯನ್ನೂ ಸಹ ಮಾಡುತ್ತಿದ್ದರು. ಕುಡಿದ ಮತ್ತಿನಲ್ಲಿ ನೊಹಾನ್, ತನ್ನ ಸ್ನೇಹಿತರಿಗೆ ಕೊಲೆಗೈಯುವುದಾಗಿ ಧಮ್ಕಿ ಹಾಕುತ್ತಿದ್ದನು. ಕ್ಷುಲ್ಲಕ ಕಾರಣಕ್ಕೆ ಎಲ್ಲರೂ ಗಲಾಟೆ ಮಾಡಿಕೊಳ್ಳುತ್ತಿದ್ದರು. ನೊಹಾನ್ ಧಮ್ಕಿಗೆ ಉಳಿದ ಸ್ನೇಹಿತರು ರೋಸಿ ಹೋಗಿದ್ದರು. ಜ. 6 ರಂದು ನೊಹಾನ್ನನ್ನು ಸ್ನೇಹಿತರು ಪಾರ್ಟಿಗೆ ಆಹ್ವಾನಿಸಿದ್ದರು.
ಇದನ್ನೂ ಓದಿ: ಬೆಳಗಾವಿ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆಟೋ ಚಾಲಕನ ಬರ್ಬರ ಹತ್ಯೆ
ಆಗ ಕುಡಿದ ಮತ್ತಿನಲ್ಲಿ ನೊಹಾನ್ ಇಬ್ರಾಹಿಂ ಸಯ್ಯದ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆಗ ಓರ್ವ ಆರೋಪಿ ಬಿಯರ್ ಬಾಟಲಿಯಿಂದ ಹೊಡೆದಿದ್ದೆ ತಡ ಇನ್ನೋರ್ವ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಮತ್ತೋರ್ವ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಹಳೆದ್ವೇಷವೇ ಕೃತ್ಯಕ್ಕೆ ಕಾರಣ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.