ಬೆಳಗಾವಿ: ಮಹಾಪುರಷರ ಮೂರ್ತಿಗಳನ್ನು ವಿರೂಪಗೊಳಿಸುವ ಜೊತೆಗೆ ಅವಮಾನಿಸಿದ ಪುಂಡರ ವಿರುದ್ಧ ಗೂಂಡಾ ಕಾಯ್ದೆಯ ಜೊತೆಗೆ ದೇಶದ್ರೋಹದ ಪ್ರಕರಣ ದಾಖಲಿಸುವ ನಿರ್ಣಯವನ್ನು ಸದನ ತೆಗೆದುಕೊಂಡಿತು.
ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡಿಸಿದ ನಿರ್ಣಯಕ್ಕೆ ಸದನದ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು. ಅಲ್ಲದೇ ಈ ನಿರ್ಣಯವನ್ನು ಕೇಂದ್ರ ಗೃಹ ಇಲಾಖೆಗೂ ಸಲ್ಲಿಸುವ ನಿರ್ಧಾರವನ್ನೂ ಮುಖ್ಯಮಂತ್ರಿ ಬೊಮ್ಮಾಯಿ ಪ್ರಕಟಿಸಿದರು. ಮಹಾಪುರುಷರಿಗೆ ಅವಮಾನಿಸಿದ ಪುಂಡರಿಗೆ ಉಗ್ರಶಿಕ್ಷೆ ನೀಡಲು ಸರ್ಕಾರ ಸಿದ್ಧವಿದೆ.
ಅಲ್ಲದೇ ದೇಶದ ಸ್ವಾಭಿಮಾನದ ಸಂಕೇತ, ಕನ್ನಡಿಗರ ಆಸ್ತಿ, ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿಯನ್ನು ಸುವರ್ಣಸೌಧದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಸಿಎಂ ಘೋಷಿಸಿದರು.
ಘಟನೆಯ ಬಗ್ಗೆ ಸದನಕ್ಕೆ ಮಾಹಿತಿ ನೀಡಿದ ಸಿಎಂ:
ನಾಡದ್ರೋಹಿ ಎಂಇಎಸ್ ಹಾಗೂ ಶಿವಸೇನೆ ಪುಂಡಾಟಿಕೆ ಹಾಗೂ ಪುಂಡರ ವಿರುದ್ಧ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸದನಕ್ಕೆ ಮಾಹಿತಿ ನೀಡಿದರು. ಗಡಿ ವಿವಾದ ಜೀವಂತ ಇಡುವುದು ಮಹಾರಾಷ್ಟ್ರದ ಕೆಲ ರಾಜಕೀಯ ಪಕ್ಷಗಳ ಬಂಡವಾಳವಾಗಿದೆ. ಗಡಿತಂಟೆಯ ನೆಪದಲ್ಲಿ ಭಾಷಾಸೌಹಾರ್ಧತೆಗೆ ಧಕ್ಕೆ ತರುವ ಕೃತ್ಯಗಳು ನಿರಂತವಾಗಿ ನಡೆಯುತ್ತಿವೆ.
ಬೆಳಗಾವಿ ಈ ರಾಜ್ಯದ ಮಹತ್ವದ ಜಿಲ್ಲೆ. ಮೂರು ರಾಜ್ಯಗಳ ಸಂಪರ್ಕಕೊಂಡಿಯ ಜೊತೆಗೆ ಸಂಪನ್ಮೂಲಭರಿತ ಜಿಲ್ಲೆಯಾಗಿ ಹೊರಹೊಮ್ಮಿದೆ. ಜನಬೆಂಬಲ ಕಳೆದುಕೊಳ್ಳುತ್ತಿರುವ ನಾಡದ್ರೋಹಿ ಎಂಇಎಸ್ ಇದೀಗ ತನ್ನ ಸಾಮರ್ಥ್ಯ ಮರುಸ್ಥಾಪನೆಗೆ ಇಂಥ ಕೃತ್ಯ ಎಸಗುತ್ತಿದೆ. ಆದರೆ ಸೂರ್ಯ-ಚಂದ್ರ ಇರುವವರೆಗೆ ಬೆಳಗಾವಿ ಸೇರಿ ಗಡಿಭಾಗದ ಪ್ರದೇಶಗಳು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಗಡಿ ತಂಟೆ ತೆಗೆಯುವ ಮಹಾರಾಷ್ಟ್ರ ನಾಯಕರಿಗೆ ತಿರುಗೇಟು ನೀಡಿದರು.
ಉಭಯ ರಾಜ್ಯಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನಮ್ಮ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳ ಜೊತೆಗೆ ಚರ್ಚಿಸಿದ್ದಾರೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆ ಜೊತೆಗೆ ನಮ್ಮ ವಾಹನಗಳ ರಕ್ಷಣೆಗೆ ಕ್ರಮವಹಿಸುವಂತೆ ಸೂಚಿಸಲಾಗಿದೆ. ಅಪರಾಧಿಕ ಮನಸ್ಥಿತಿಯ ವ್ಯಕ್ತಿಗಳು ಶಾಂತಿಭಂಗಕ್ಕೆ ಯತ್ನಿಸುತ್ತಿದ್ದಾರೆ. ಈ ಸಲ ನಮ್ಮ ಸರ್ಕಾರ ದಿಟ್ಟ ನಿಲುವು ತೆಗೆದುಕೊಳ್ಳಲಿದೆ.
ಕೃತ್ಯಕ್ಕೆ ಕಾರಣ, ಕೃತ್ಯಗಳನ್ನು ಪ್ರಚೋದಿಸುವವರ್ಯಾರು, ಷಡ್ಯಂತ್ರಕ್ಕೆ ಕಾರಣಗಳೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬೆಳಗಾವಿ ಹಾಗೂ ಬೆಂಗಳೂರಲ್ಲಿ ಘಟನೆ ನಡೆದು 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಸಲ ನಮ್ಮ ಸರ್ಕಾರ ಯಾರದೇ ಒತ್ತಡಕ್ಕೆ ಮಣಿಯುವುದಿಲ್ಲ. ಎಂಇಎಸ್ ನಿಷೇಧದ ಕುರಿತೂ ಸಲಹೆಗಳು ಬಂದಿದ್ದು, ಕಾನೂನಾತ್ಮಕವಾಗಿ ಪರಿಶೀಲನೆ ನಡೆಸುತ್ತೇವೆ. ಸಾಧ್ಯವಾಗದಿದ್ದರೆ ಎಂಇಎಸ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಜರುಗಿಸುತ್ತೇವೆ ಎಂದರು.
ಇದನ್ನೂ ಓದಿ: ಬೆಳಗಾವಿಯ ಅಧಿವೇಶನದಲ್ಲಿ ನಾಳೆಯೇ ಮತಾಂತರ ನಿಷೇಧ ಕಾಯ್ದೆ ಮಂಡನೆ : ಸಚಿವ ಸಂಪುಟ ತೀರ್ಮಾನ
ರಾಜ್ಯಕ್ಕೆ ಸೇರಿಸಿಕೊಳ್ಳಲು ಸಿದ್ಧ:
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ 40 ಗ್ರಾಮ ಪಂಚಾಯಿತಿಗಳಲ್ಲಿ ಅಲ್ಲಿನ ಸದಸ್ಯರು ಕರ್ನಾಟಕ ಸೇರುವ ನಿರ್ಣಯ ಕೈಗೊಂಡಿದ್ದಾರೆ. ಈ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಿಸುತ್ತಿವೆ.
ಮಹಾರಾಷ್ಟ್ರ ಸರ್ಕಾರಕ್ಕೆ ಇಲ್ಲಿನ ಜನರಿಗೆ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರು ಕೊಡಲಾಗದಿದ್ದರೆ ಕರ್ನಾಟಕ ಸೇರುತ್ತೇವೆ ಎಂದು 40 ಗ್ರಾಪಂಗಳು ನಿರ್ಣಯ ಕೈಗೊಂಡಿವೆ. ಅಗತ್ಯ ಬಿದ್ದರೆ ಆ ಎಲ್ಲರನ್ನೂ ರಾಜ್ಯಕ್ಕೆ ಸೇರಿಸಿಕೊಳ್ಳಲು ನಾನು ಸಿದ್ಧನಿದ್ದೇನೆ. ನನ್ನ ಹೇಳಿಕೆಯಿಂದ ವಿರೋಧವಾದರೂ ಪರವಾಗಿಲ್ಲ ಎಂದರು.
ಜೆಡಿಎಸ್ ನೈತಿಕ ಬೆಂಬಲ:
ಎಂಇಎಸ್ ಪುಂಡಾಟಿಕೆ ಖಂಡಿಸಿ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಸದನದಲ್ಲಿಂದು ಜೆಡಿಎಸ್ ಸದಸ್ಯರು ಕನ್ನಡ ಶಾಲು ಧರಿಸಿ ಸಭೆಯಲ್ಲಿ ಮಾತನಾಡುವ ಮೂಲಕ ಕನ್ನಡ ಪರ ಸಂಘಟನೆಗಳಿಗೆ ನೈತಿಕ ಬೆಂಬಲ ಸೂಚಿಸಿದರು.
ಎಂಇಎಸ್ ಪುಂಡಾಟಿಕೆ ವಿರುದ್ಧ ಸದನದಲ್ಲಿ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಜೆಡಿಎಸ್ ಸದಸ್ಯರು ಪಟ್ಟು ಹಿಡಿದು, ನಾಡದ್ರೋಹಿಗಳ ಕೃತ್ಯವನ್ನು ಖಂಡಿಸಿದರು. ಎಂಇಎಸ್ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರವನ್ನು ಆಗ್ರಹಿಸಿದರು.