ಬೆಳಗಾವಿ : ಈ ಬಾರಿ ಮುಂಗಾರು ಮಳೆ ಕೈ ಕೊಟ್ಟಿದ್ದು, ಮೋಡ ಮುಸುಕಿದ ವಾತಾವರಣವಿದ್ದರೂ ಆಗೊಮ್ಮೆ ಈಗೊಮ್ಮೆ ಅಂತ ಸುರಿಯುತ್ತಿರುವ ಸಣ್ಣ ತುಂತುರು ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿ ಉಪಯೋಗ ಆಗುತ್ತಿಲ್ಲ. ಇದರಿಂದಾಗಿ ಬೆಳಗಾವಿ ತಾಲೂಕು ಮತ್ತು ಜಿಲ್ಲೆಯ ರೈತರು ಕೈ ಕೈ ಹಿಸುಕಿಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ.
ಜುಲೈ ತಿಂಗಳು ಆರಂಭವಾಗುತ್ತಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ ಮಳೆರಾಯ ಅಬ್ಬರ ತೋರಿಸುತ್ತಿಲ್ಲ. ಇದು ಜಿಲ್ಲೆಯ ರೈತರ ಆತಂಕಕ್ಕೆ ಕಾರಣವಾಗಿದೆ. ಮಳೆ ಸುರಿಯದೇ ಇರುವ ಹಿನ್ನೆಲೆಯಲ್ಲಿ ಬೆಳಗಾವಿ ಸುತ್ತಲಿನ ಗ್ರಾಮಗಳ ಹೊಲಗಳು ರೈತರು ಮತ್ತು ಕೃಷಿ ಚಟುವಟಿಕೆ ಇಲ್ಲದೇ ಬಣಗುಡುತ್ತಿವೆ. ಇಷ್ಟೊತ್ತಿಗಾಗಲೇ ಹಚ್ಚ ಹಸಿರಿನ ಬೆಳೆಗಳಿಂದ ಕಂಗೊಳಿಸಬೇಕಿದ್ದ ಹೊಲಗಳು ಬೆಳೆ ಇಲ್ಲದೇ ಖಾಲಿ ಖಾಲಿಯಾಗಿ ಕಾಣಿಸುತ್ತಿವೆ. ಬಹಳಷ್ಟು ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಬೀಜ ಬಿತ್ತಿ ಮಳೆಯಾಗದಿದ್ದರೆ ಸುಮ್ಮನೆ ಯಾಕೆ ಕೈ ಸುಟ್ಟುಕೊಳ್ಳುವುದು ಎಂದು ಬಿತ್ತಲು ಮನಸ್ಸೇ ಮಾಡುತ್ತಿಲ್ಲ. ಅಲ್ಲೊಬ್ಬ ಇಲ್ಲೊಬ್ಬರು ಎಂಬಂತೆ ರೈತರು ಧೈರ್ಯ ಮಾಡಿ ಬಿತ್ತನೆ ಮಾಡುತ್ತಿರುವುದು ಕಂಡುಬಂದಿದೆ.
ಕೊಂಡಸಕೊಪ್ಪ ಗ್ರಾಮದ ಬಳಿ ಹೊಲದಲ್ಲಿ ಬಿತ್ತನೆಗೆ ಸಿದ್ಧತೆ ನಡೆಸಿದ್ದ ರೈತರನ್ನು ಈಟಿವಿ ಭಾರತ ಮಾತನಾಡಿಸಿದಾಗ, "ಮೇ ತಿಂಗಳ ಮೊದಲ ವಾರದಲ್ಲಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಇನ್ನೇನು ಕೊಯ್ಲಿಗೆ ಬಂದಿದ್ದ ಮೂಲಂಗಿ ಬೆಳೆ ಹಾಳಾಗಿ ನಷ್ಟ ಅನುಭವಿಸಿದ್ದೇವೆ. ಮಳೆ ಆಗುತ್ತದೆ ಎಂಬ ನಂಬಿಕೆಯಲ್ಲಿ ನವಲಕೋಲ ಹಚ್ಚಲು ಸಿದ್ಧತೆ ನಡೆಸಿದ್ದೇವೆ. ಆದರೆ ಒಂದು ತಿಂಗಳಾದರೂ ಮಳೆಯಾಗುತ್ತಿಲ್ಲ. ದೇವರು ಈ ಬಾರಿಯಾದರೂ ನಮ್ಮ ಕೈ ಬಿಡಬಾರದು" ಎಂದು ಶಹಾಪುರ ರೈತ ನಿಂಗಪ್ಪ ಕಡೆಮನಿ ಹೇಳಿದರು.
ಕೊಂಡಸಕೊಪ್ಪ ಗ್ರಾಮದ ರೈತ ಯಲ್ಲಪ್ಪ ಸಾಂಬ್ರೇಕರ್ ಮಾತನಾಡಿ, "ಮೂಲಂಗಿ ಹಾನಿಯಾಗಿ 20 ಸಾವಿರ ರೂ. ನಷ್ಟವಾಯಿತು. ಸರಕಾರ ನಮಗೇನು ಪರಿಹಾರ ಕೊಡುತ್ತೆ? ಅವರು ಬಂದು ನಮ್ಮ ಕಷ್ಟ ನೋಡೋದಿಲ್ಲ" ಎಂದು ಬೇಸರಿಸಿದರು.
ಮಳೆಗಾಗಿ ಮುಸ್ಲಿಮರಿಂದ ಪ್ರಾರ್ಥನೆ : ಜಿಲ್ಲೆಯ ಮತ್ತೊಂದೆಡೆ, ಮುಸ್ಲಿಮರು ಸೇರಿ ಮಳೆಗಾಗಿ ಸಾಮೂಹಿಕವಾಗಿ ಕಣ್ಣೀರಿನ ಪ್ರಾರ್ಥನೆ ಸಲ್ಲಿಸಿದ್ದಾರೆ. ರಾಜ್ಯದ ಹಲವೆಡೆ ಮುಂಗಾರು ಚುರುಕುಗೊಂಡಿದ್ದರೂ ಬೆಳಗಾವಿ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗುತ್ತಿಲ್ಲ. ಇದರಿಂದ ನಗರದ ಅಂಜುಮನ್ ಸಂಸ್ಥೆಯ ಈದ್ಗಾ ಮೈದಾನದಲ್ಲಿ ಮಳೆಗಾಗಿ ಮುಸ್ಲಿಮರು ಇತ್ತೀಚೆಗೆ ಪ್ರಾರ್ಥನೆ ಸಲ್ಲಿಸಿದ್ದರು.
ಇದನ್ನೂ ಓದಿ : ಕೈಕೊಟ್ಟ ಮುಂಗಾರು: ಬೆಳೆ ನಾಶ ಮಾಡುತ್ತಿರುವ ರೈತರು.. ಮಳೆಗಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಕಣ್ಣೀರಿಟ್ಟ ಮುಸ್ಲಿಂ ಬಾಂಧವರು