ಬೆಳಗಾವಿ: ನನ್ನ ಝಂಡಾ ಬದಲಾವಣೆ ಆಗಬಹುದು ಆದರೆ, ಅಜೆಂಡಾ ಬದಲಾಗದು ಎಂದು ಬಿಜೆಪಿ ಎಂಎಲ್‌ಸಿ ಹೆಚ್. ವಿಶ್ವನಾಥ್ ಹೇಳಿದ್ದಾರೆ. ನನ್ನ ರಕ್ತದ ಕಣಕಣದಲ್ಲೂ ಕಾಂಗ್ರೆಸ್ ಇದ್ದು, ಬಿಜೆಪಿ ತೊರೆಯುವ ಕಾಲ ಸನ್ನಿಹಿತವಾಗಿದೆ ಎಂಬ ಅವರ ಹೇಳಿಕೆ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಂದರ್ಭಗಳು ಹಾಗು ಹಲವಾರು ಕಾರಣಗಳಿಂದ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಬೇಕಾಯಿತು ಎಂದರು.
ವಲಸಿಗರಿಂದ ಬಿಜೆಪಿ ಹಾಳಾಯ್ತು ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕೆಂಡಾಮಂಡರಾದ ಹೆಚ್.ವಿಶ್ವನಾಥ್, ಅವನು ಕೆ.ಎಸ್.ಈಶ್ವರಪ್ಪ ಅಲ್ಲ, ಹೆಚ್.ಎಂ.ಈಶ್ವರಪ್ಪ. ಹೆಚ್.ಎಂ.ಅಂದ್ರೆ ಹುಚ್ಚುಮುಂಡೇದು ಅಂತಾ ಎಂದು ಕಿಡಿಕಾರಿದರು.
ಭಾಷಣ ವೇಳೆ ಜವಾಹರಲಾಲ್ ನೆಹರು ಹೊಗಳಿದ ವಿಚಾರಕ್ಕೆ ಬೆಳಗಾವಿ ಅಧಿವೇಶನದ ಸದನದಲ್ಲಿ ಬಿಜೆಪಿ ಎಂಎಲ್‌ಸಿ ರವಿಕುಮಾರ್ ಭಾಷಣ ಮಾಡಿದ್ದರು. ಈ ದೇಶದ ಕಡುಭ್ರಷ್ಟ ಪ್ರಧಾನಿ ನೆಹರು ಅಂದಿದ್ರು, ಎಲ್ಲಾದರೂ ಉಂಟಾ ಅದು?. ನಾನದಕ್ಕೆ ಹೇಳಿದ್ದೆ ನೋಡಪ್ಪ ಬ್ರಿಟಿಷರು ಭಾರತ ಬಿಟ್ಟು ಹೋದಾಗ ಭಾರತದ ಜನಸಂಖ್ಯೆ 33 ಕೋಟಿ ಇತ್ತು. ನಾವು ಶಾಲೆಯಲ್ಲಿ ಇರಬೇಕಾದ್ರೆ ಅಮೆರಿಕದ ಜೋಳ, ಗೋಧಿಯಲ್ಲಿ ಉಪ್ಪಿಟ್ಟು ಮಾಡಿಕೊಡುತ್ತಿದ್ದರು ಎಂದು ನೆನಪಿಸಿದರು.
ಅದಕ್ಕೆ ನಾನು ಅವರಿಗೆ ನಿಮ್ಮ ತಂದೆನೋ, ತಾತನೋ ಇದ್ರೆ ಕೇಳು ಅಂದೆ. 9 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಕರ್ನಾಟಕದ ರಾಜಧಾನಿಗೆ ಏನು ಕೊಟ್ರಿ, ಏನೂ ಕೊಡಲಿಲ್ಲ. ಜವಾಹರಲಾಲ್ ನೆಹರು ರಾಜ್ಯದ ರಾಜಧಾನಿ ಬೆಂಗಳೂರಿಗೆ ನವರತ್ನ ಕೊಟ್ರು. ಹೆಚ್‌ಎಂಟಿ, ಹೆಚ್‌ಎಎಲ್, ಡಿಆರ್‌ಡಿಓ, ನಿಮ್ಹಾನ್ಸ್ ಸೇರಿ ನವರತ್ನ ಕೊಟ್ಟು ಉದ್ಯೋಗಾವಕಾಶ ಕೊಟ್ಟವರು ನೆಹರು. ಈ ರೀತಿ ಮಾತನಾಡಬಾರದು, ಸದನದ ಸದಸ್ಯ ಗಂಭೀರವಾಗಿ ಮಾತನಾಡಬೇಕು ಎಂದಿದ್ದೆ ಎಂದು ಹೆಚ್. ವಿಶ್ವನಾಥ್ ಹೇಳಿದರು.
ಬಿಜೆಪಿಗೆ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಮಾಡಲು ಆಗುತ್ತಿಲ್ಲ ಎಂಬ ಕಾಂಗ್ರೆಸ್ ಟೀಕೆ ಕುರಿತು ಮಾತನಾಡಿ, ಬಿಜೆಪಿ ಯಾವುದೇ ಕಾರಣಕ್ಕೂ ಮತ್ತೆ ಅಧಿಕಾರಕ್ಕೆ ಬರಲ್ಲ, ಬಂದೂ ಇಲ್ಲ. ಒಂದ್ಸಾರಿ ಕುಮಾರಸ್ವಾಮಿ ಹೆಗಲು ಮೇಲೆ ಕುಳಿತುಕೊಂಡು ಬಂದರು. ಒಂದ್ಸಾರಿ ನಮ್ಮ ಹೆಗಲ ಮೇಲೆ ಕುಳಿತುಕೊಂಡು ಬಂದು ಅಧಿಕಾರ ಮಾಡಿದ್ದರು. ಸ್ವಂತ ಬಲದ ಮೇಲೆ ಬಿಜೆಪಿ ಯಾವತ್ತಾದರೂ ಅಧಿಕಾರಕ್ಕೆ ಬಂದಿದೆಯಾ?. ಬಿಜೆಪಿ ಮುಂದೆ ಅಧಿಕಾರಕ್ಕೆ ಬರೋದು ಇಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಐದು ಕೆಜಿ ಅಕ್ಕಿ ಬದಲು ಹಣ ನೀಡುವ ಬಗ್ಗೆ ಸರ್ಕಾರ ನಿರ್ಧಾರಕ್ಕೆ ಜನ ವಿರೋಧ ಮಾಡುತ್ತಿಲ್ಲ, ಯಾರೋ ವಿರೋಧ ಮಾಡಿಸುತ್ತಿದ್ದಾರೆ. ಜನ ವಿರೋಧ ಮಾಡುತ್ತಿಲ್ಲ, ಜನರಿಗೆ ಅನುಕೂಲ ಆಗುತ್ತಿದೆ. ಹತ್ತು ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುತ್ತಿದ್ದಾರೆ. ದುಡ್ಡು ಇದ್ದವರು ಹೇಳ್ತಾರೆ ಎಲ್ಲಾದರೂ ಹೋಗಿ ಥ್ರಿಲ್ ಆಗಿ ಬರೋಣ ಅಂತಾ, ಬಡವರು ಎಲ್ಲಿ ಹೋಗುತ್ತಿದ್ರು. ನೀವು ರಾಮ ರಾಮ ಅಂತಿದ್ದಿರಲ್ಲ, ನಿಮ್ಮ ರಾಮನ ತೋರಿಸಲು ಕಾಂಗ್ರೆಸ್ನವರು ಬಸ್ ಕೊಟ್ಟಿದ್ದಾರೆ ಎಂದು ಟೀಕಾಕಾರರಿಗೆ ತಿರುಗೇಟು ಕೊಟ್ಟರು.
ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ ಕಿತ್ತೆಸೆದು, ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುತ್ತೇವೆ: ಸಚಿವ ಡಾ.ಎಂ.ಸಿ.ಸುಧಾಕರ್