ಬೆಂಗಳೂರು/ ಬೆಳಗಾವಿ : ಆನೆ, ಹುಲಿ ಸೇರಿದಂತೆ ಇತರ ಕ್ರೂರ ಮೃಗಗಳ ಸಂಘರ್ಷ ತಪ್ಪಿಸಲು ಶಾಶ್ವತ ಕ್ರಮಗಳನ್ನು ಕೈಗೊಳ್ಳುವಂತೆ ಪಕ್ಷಭೇದ ಮರೆತು ಎಲ್ಲ ಸದಸ್ಯರು ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಇಂದು ಶೃಂಗೇರಿ ಕ್ಷೇತ್ರದ ಶಾಸಕ ಪಿ ಡಿ ರಾಜೇಗೌಡ ವಿಷಯ ಪ್ರಸ್ತಾಪಿಸಿ, ತಮ್ಮ ಕ್ಷೇತ್ರದ 18 ಗ್ರಾಮಗಳಲ್ಲಿ ನಿರಂತರವಾಗಿ ಆನೆ ದಾಳಿಗಳಾಗುತ್ತಿವೆ. ಒಂದೆಡೆ ಕುದುರೆಮುಖ ಮತ್ತೊಂದೆಡೆ ಅಭಯಾರಣ್ಯಗಳನ್ನು ಹೊಂದಿರುವ ತಮ್ಮ ಕ್ಷೇತ್ರದಲ್ಲಿ ವನ್ಯಜೀವಿಗಳ ಸಂಘರ್ಷ ಮರುಕಳಿಸುತ್ತಿದೆ ಎಂದರು.
ಕಂದಕ ಹಾಗೂ ತಂತಿ ಬೇಲಿಗಳ ನಿರ್ಮಾಣ ಪ್ರಯೋಜನವಾಗುತ್ತಿಲ್ಲ. ರೈಲ್ವೆ ಹಳಿಗಳ ಬ್ಯಾರಿಕೇಡ್ ನಿರ್ಮಾಣ ಶಾಶ್ವತ ಪರಿಹಾರವಾಗಿದೆ. 225 ಕೋಟಿ ರೂ. ವೆಚ್ಚದಲ್ಲಿ ಬ್ಯಾರಿಕೇಡ್‍ಗಳನ್ನು ನಿರ್ಮಿಸುವ ಯೋಜನೆಯಾಗಿದ್ದು, ಈ ವರ್ಷ 120 ಕೋಟಿ ರೂ. ಒದಗಿಸುವುದಾಗಿ ತಿಳಿಸಲಾಗಿದೆ. ಆದ್ಯತೆ ಮೇರೆಗೆ ತ್ವರಿತವಾಗಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಬಿಜೆಪಿ ಹಿರಿಯ ಸದಸ್ಯ ಆರಗ ಜ್ಞಾನೇಂದ್ರ ಮಧ್ಯಪ್ರವೇಶಿಸಿ, ರೈತರು ಕಷ್ಟಪಟ್ಟು ಬೆಳೆದ ಬೆಳೆಗಳ ಮೇಲೆ ಆನೆಗಳು ದಾಳಿ ಮಾಡಿ, ಒಂದು ಗಂಟೆಯಲ್ಲೇ ನಾಶ ಮಾಡುತ್ತಿವೆ. ಶಾಸಕರಾದ ಹೆಚ್. ಡಿ ತಮ್ಮಯ್ಯ, ಹರೀಶ್ ಪೂಂಜಾ, ಭಾಗಿರಥಿ ಮುರುಳ್ಯ ಸೇರಿದಂತೆ ಹಲವು ಶಾಸಕರು ವನ್ಯಜೀವಿಗಳ ಸಂಘರ್ಷದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಚರ್ಚೆ ತೀವ್ರವಾದಾಗ ಸ್ಪೀಕರ್ ಯು. ಟಿ ಖಾದರ್ ಅವರು, ಅಲ್ಲಿ ಆನೆ ಕಾಟ, ಇಲ್ಲಿ ನಿಮ್ಮ ಕಾಟ ಎಂದರು.
ಈ ಮಧ್ಯೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಆನೆ-ಮಾನವ ಸಂಘರ್ಷ ದಿನೇ ದಿನೆ ಹೆಚ್ಚುತ್ತಿದೆ. ರೈಲ್ವೆ ಹಳಿಗಳನ್ನು ಉಪಯೋಗಿಸಿಕೊಂಡು ಬ್ಯಾರಿಕೇಡ್ ನಿರ್ಮಿಸುವುದರಿಂದ ಸಮಸ್ಯೆ ಬಗೆಹರಿಸಬಹುದು. ಶೃಂಗೇರಿ ಕ್ಷೇತ್ರದಲ್ಲಿ 7.51 ಕಿ. ಮೀ ಉದ್ದಕ್ಕೆ ಬ್ಯಾರಿಕೇಡ್ ನಿರ್ಮಿಸಬೇಕೆಂಬ ಪ್ರಸ್ತಾವನೆ ಕಲ್ಪಿಸಬೇಕು. ಈಗಾಗಲೇ 5 ಕೋಟಿ ರೂ. ಗಳನ್ನು ಖರ್ಚು ಮಾಡಿ 4 ಕಿ.ಮೀ ಹೆಚ್ಚಿನ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಅನುದಾನ ಆಧರಿಸಿ ಬಾಕಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸದನಕ್ಕೆ ತಿಳಿಸಿದರು.
ರಾಜ್ಯದಲ್ಲಿ ಒಟ್ಟು 6395 ಆನೆಗಳಿವೆ. ಆನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಜನವಸತಿ ಪ್ರದೇಶಗಳಿಗೆ ನುಗ್ಗದಂತೆ ತಡೆಯಲು 200 ಕೋಟಿ ರೂ. ವೆಚ್ಚದಲ್ಲಿ 120 ಕಿ. ಮೀ ಬ್ಯಾರಿಕೇಡ್‍ನ್ನು ರಾಜ್ಯಾದ್ಯಂತ ನಿರ್ಮಿಸಲಾಗುತ್ತಿದೆ. ಏಳು ವಿಶೇಷ ಕಾರ್ಯಪಡೆಗಳು ಕೆಲಸ ನಿರ್ವಹಿಸುತ್ತಿದ್ದು, ಅಗತ್ಯವಾದರೆ ಮತ್ತಷ್ಟು ಹೆಚ್ಚುವರಿ ಕಾರ್ಯಪಡೆಗಳನ್ನು ರಚನೆ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಸಾರ್ವಜನಿಕರ ನೈಜತೆ ನೋಡಿಕೊಂಡು ವಿಧಾನಸಭೆಗೆ ಪಾಸ್ ವಿತರಿಸಲು ಸ್ಪೀಕರ್ ಯು ಟಿ ಖಾದರ್ ಸೂಚನೆ