ಬೆಳಗಾವಿ: ಶಾಸಕ ಅನಿಲ್ ಬೆನಕೆಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆ, ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
ನನ್ನ ಜನ್ಮ ದಿನದಂದು ಸಂಜೆಯೇ ನನಗೆ ಕೊರೊನಾ ಸೋಂಕು ಇರುವುದು ದೃಢವಾಯಿತು. ಜನ್ಮದಿನ ಆಚರಿಸಿಕೊಳ್ಳದ್ದಕ್ಕೆ ಅಭಿಮಾನಿಗಳು ಬೇಜಾರಾದ್ರು. ಆದರೆ, ಜನ್ಮದಿನಾಚರಣೆ ಮಾಡಲಿಲ್ಲವೆಂಬ ಖುಷಿ ನನಗಿದೆ. ಆಚರಣೆ ಮಾಡ್ತಿದ್ರೆ ಏನಾದ್ರು ಅನಾಹುತ ಅಗುತ್ತೆ ಎಂಬುದು ನನಗೆ ಗೊತ್ತಿತ್ತು. ಈ ಕಾರಣಕ್ಕೆ ನಾನು ಯಾರನ್ನೂ ಭೇಟಿಯಾಗದೆ ಕ್ವಾರಂಟೈನ್ ಆಗಿದ್ದೆ ಎಂದು ವಿಡಿಯೋದಲ್ಲಿ ಬೆನಕೆ ಹೇಳಿದ್ದಾರೆ.
ಕೊರೊನಾ ಅಂದ್ರೆ ಜನ ಯಾಕೆ ಹೆದರುತ್ತಿದ್ದಾರೆ ಅನ್ನೋದು ಗೊತ್ತಿಲ್ಲ. ನಾನು ಸೋಂಕಿತನಾದರೂ ನನಗೇನು ಆಗಿಲ್ಲ. ನಾಲ್ಕು ದಿನಗಳಿಂದ ಹೋಂ ಕ್ವಾರಂಟೈನ್ ಆಗಿದ್ದೇನೆ. ಬೇರೆ ಕಾಯಿಲೆಯಂತೆ ಕೋವಿಡ್ ಕೂಡ ಒಂದು ಕಾಯಿಲೆ. ಕೋವಿಡ್ಗೆ ಯಾರೂ ಹೆದರಬಾರದು, ಆದರೆ ಕಾಳಜಿ ತೆಗೆದುಕೊಳ್ಳಬೇಕು. ಮಾಸ್ಕ್, ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವಿಪರ್ಯಾಸವೆಂದರೆ ಯಾರೂ ಕಾಳಜಿ ವಹಿಸುತ್ತಿಲ್ಲ. ಗಾರ್ಡನ್, ಮೈದಾನ ಬಂದ್ ಇದ್ರೆ ಕಾಂಪೌಂಡ್ ಹಾರಿ ವಾಕಿಂಗ್ ಮಾಡ್ತಿದ್ದಾರೆ, ಆಟ ಆಡುತ್ತಿದ್ದಾರೆ. ಜನ ಕೊರೊನಾವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ನನಗೆ ಅನುಮಾನ ಬಂದಾಗ ಹೇಗೆ ಕ್ವಾರಂಟೈನ್ ಆದ್ನೋ, ಹಾಗೆಯೇ ನೀವೆಲ್ಲ ಜಾಗ್ರತೆ ವಹಿಸಿ ಎಂದು ಶಾಸಕರು ಮನವಿ ಮಾಡಿದ್ದಾರೆ.
ಮಾರುಕಟ್ಟೆಯಲ್ಲಿ ಮಾಸ್ಕ್ ಇಲ್ಲದೆ ಜನ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಹೀಗಾದರೆ ಕೊರೊನಾ ನಮ್ಮಿಂದ ದೂರವಾಗೋದು ಹೇಗೆ. ನಾವೆಲ್ಲರೂ ಗಟ್ಟಿಯಾಗಿದ್ರೆ ಮಾತ್ರ ಕೊರೊನಾ ಓಡಿ ಹೋಗುತ್ತದೆ. ಮುಂದಿನ ದಿನಗಳಲ್ಲಿ ಬೆಳಗಾವಿಯಿಂದ ಕೊರೊನಾ ಓಡಿಸೋಣ. ನಿಮ್ಮ ಅಕ್ಕಪಕ್ಕದವರಿಗೆ ಸೋಂಕು ಬಂದ್ರೆ ಅವರಿಗೆ ಧೈರ್ಯ ಹೇಳಿ ಎಂದಿದ್ದಾರೆ.