ಬೆಳಗಾವಿ : ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರ ಮೇಲೆ ಉತ್ತರ ಪ್ರದೇಶದ ಮಾದರಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅಭಯ್ ಪಾಟೀಲ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಮಂಗಳೂರು ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಅವರು, ದೇಶ ವಿರೋಧಿ ಚಟುವಟಿಕೆ ತೊಡಗಿದವರ ಮೇಲೆ ಉಗ್ರ ಕ್ರಮ ಆಗಬೇಕು. ಕೆಲವರು ಪಾಕಿಸ್ತಾನ ಜಿಂದಾಬಾದ್ ಅಂತಿದ್ದಾರೆ. ಅವರ ಮೇಲೂ ಕ್ರಮ ಆಗಬೇಕು. ಇಂತವರ ಮೇಲೆ ಉತ್ತರ ಪ್ರದೇಶದ ಮಾದರಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇಂತಹ ಕೃತ್ಯಗಳಲ್ಲಿ ತೊಡಗುವವರ ಮೇಲೆ ಕಠಿಣಕ್ರಮ ಕೈಗೊಳ್ಳಲು ಬೇಕಾದ ವಿಶೇಷ ಕಾನೂನು ರೂಪಿಸಬೇಕು. ಅವರನ್ನು ಬಂಧಿಸಿ ಜೈಲಿಗೆ ಕಳುಹಿಸುವ ಕೆಲಸ ಮಾತ್ರ ಆಗಬಾರದು. ಅಂತಹವರನ್ನು ಎನ್ ಕೌಂಟರ್ ಮಾಡಬೇಕು ಜೊತೆಗೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದರು.
ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವವರಲ್ಲಿ ಅವರದ್ದೇ ಆದ ಅಜೆಂಡಾ ಇರುತ್ತದೆ. ಇವರು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಾರೆ. ಇಂತವರಿಗೆ ಯಾರು ಆಶ್ರಯ ಕೊಡುತ್ತಾರೋ ಅವರ ಮೇಲೆ ಮೊದಲು ಕ್ರಮ ಆಗಬೇಕು. ಇದೇ ವೇಳೆ, ರಾಜಕೀಯ ಶಕ್ತಿಗಳೇ ಇಂತವರಿಗೆ ಆಶ್ರಯ ಕೊಡುತ್ತಿರುವುದಾಗಿ ಶಾಸಕ ಅಭಯ್ ಪಾಟೀಲ್ ಆರೋಪಿಸಿದರು.
ಇದನ್ನೂ ಓದಿ : ನಕಲಿ ಆಧಾರ್ ನೀಡಿ ಮೊಬೈಲ್ ರಿಪೇರಿ ತರಬೇತಿಗೆ ಸೇರಿಕೊಂಡಿದ್ದ ಶಂಕಿತ: ಮೊಬೈಲ್ ಅಂಗಡಿ ಮಾಲೀಕರ ಸಂದರ್ಶನ