ಬೆಳಗಾವಿ : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆದಿರುವುದನ್ನು ಕಾಂಗ್ರೆಸ್ನವರೇ ರಾಜಕೀಯಗೊಳಿಸುತ್ತಿದ್ದಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಆರೋಪಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ದಾಳಿ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದರ ಉದ್ದೇಶ ರಾಜಕೀಕರಣಗೊಳಿಸಲು ಅಲ್ಲವೇ..? ಸಿಬಿಐ ದಾಳಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಡಿಕೆಶಿ ಮನೆ ಮೇಲಿನ ದಾಳಿ ರಾಜಕೀಯ ಪ್ರೇರಿತವೇನಲ್ಲ. ಮೊದಲಿನಿಂದಲೂ ಅವರ ವಿರುದ್ಧ ಪ್ರಕರಣಗಳಿವೆ, ಅಧಿಕಾರಿಗಳ ಮಟ್ಟದಲ್ಲಿ ದಾಳಿ ನಡೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನನಗಿಲ್ಲ ಎಂದರು.
ಕೋವಿಡ್ನಂಥ ಪರಿಸ್ಥಿತಿಯಲ್ಲೂ ಯಡಿಯೂರಪ್ಪನವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ. ನಮ್ಮ ಉತ್ತಮ ಆಡಳಿತವೇ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ನೆರವಾಗಲಿದೆ. ಉಪಚುನಾವಣೆ ನಡೆಯಲಿರುವ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಪರ ಅಲೆ ಇದೆ. ಶಿರಾ, ಆರ್.ಆರ್. ನಗರ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ದಾಖಲಿಸಲಿದೆ. ಕೊರೊನಾ ಸೋಂಕು ನನಗೂ ತಗುಲಿ, ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದಿದ್ದೇನೆ. ದೂರದ ಪ್ರವಾಸ ಮಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ. ವೈದ್ಯರ ಸಲಹೆ ಪಡೆದು ಉಪಚುನಾವಣೆ ಪ್ರಚಾರಕ್ಕೆ ತೆರಳುತ್ತೇನೆ ಎಂದರು.