ಬೆಳಗಾವಿ : ಬೆಳಗಾವಿಯ ಬೀಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ನ್ಯೂನ್ಯತೆ ಬಗ್ಗೆ ಮಾಧ್ಯಮಗಳಲ್ಲಿ ನಿರಂತರ ವರದಿ ಪ್ರಸಾರವಾಗುತ್ತಿರುವ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಎಚ್ಚೆತ್ತುಕೊಂಡಿದ್ದಾರೆ. ಇಂದು ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅಸಮಾಧಾನ ಹೊರ ಹಾಕಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀಮ್ಸ್ ನ ಕೋವಿಡ್ ವಾರ್ಡ್ ನ ಪರಿಸ್ಥಿತಿ ಅವಲೋಕಿಸಲು ಪ್ರತಿ 3 ಗಂಟೆಗೊಮ್ಮೆ ಡಿಸಿ, ಸಿಇಒ ಹಾಗೂ ಎಸ್ಪಿ ಭೇಟಿ ನೀಡಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಬೀಮ್ಸ್ ನ ಅವ್ಯವಸ್ಥೆ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅದಕ್ಕಾಗಿ ಅಧಿಕಾರಿಗಳ ಸಭೆ ಕರೆದು ಅವ್ಯವ್ಯಸ್ಥೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ಮುಂದೆ ಇಲ್ಲಿನ ಸೋಂಕಿತರಿಗೆ ತೊಂದರೆಯಾಗುವುದಿಲ್ಲ ಎಂದರು.
ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆಗೆ ಪಡೆಯಲಾಗುತ್ತಿದೆ. ಸೋಂಕಿತರ ಚಿಕಿತ್ಸೆಗೆ ಬೆಡ್ ನೀಡದ ಆಸ್ಪತ್ರೆ ವಿರುದ್ಧ ಕ್ರಮ ಜರುಗಿಸಲಾಗುವುದು. ತಾಲೂಕು ಆಸ್ಪತ್ರೆಗಳಲ್ಲಿ ಕೂಡ ಸೋಂಕಿತರಿಗೆ ಚಿಕಿತ್ಸೆಗೆ ಕ್ರಮವಹಿಸಲಾಗಿದೆ. ಸಣ್ಣ ಪುಟ್ಟ ಕಾಯಿಲೆಗಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆ ತೆರೆಯಲು ಸೂಚನೆ ನೀಡಲಾಗುವುದು ಎಂದರು.
ಬೆಳಗಾವಿಯನ್ನು ಸದ್ಯ ಲಾಕ್‌ಡೌನ್ ಮಾಡುವುದಿಲ್ಲ. ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಒಂದೇ ಪರಿಹಾರ ಅಲ್ಲ. ಜನರೇ ರೋಗದ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಗತ್ಯ ಬಿದ್ದರೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಜರುಗಿಸಲಾಗುವುದು ಎಂದರು.