ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಐದು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ. ತಾವು ಪ್ರತಿನಿಧಿಸುವ ಗೋಕಾಕ್ ಕ್ಷೇತ್ರದಲ್ಲೇ ಮೂಲ ಸೌಕರ್ಯ ವಂಚಿತ ಐದು ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿ ದತ್ತು ಸ್ವೀಕರಿಸಿದ್ದಾರೆ.
ಗೋಕಾಕ್ ತಾಲೂಕಿನ ಖನಗಾಂವ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆ, ಮಮದಾಪೂರ ಗ್ರಾಮದ ಗಂಡು ಮಕ್ಕಳ ಸರ್ಕಾರಿ ಮಾದರಿ ಶಾಲೆ, ಅಂಕಲಗಿಯ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಧುಪದಾಳ ಮತ್ತು ಸುಲಧಾಳದ ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆದಿದ್ದಾರೆ.
ಓದಿ: ರಾಜ್ಯದಲ್ಲಿಂದು 857 ಮಂದಿಗೆ ಕೊರೊನಾ ದೃಢ: 7 ಮಂದಿ ಬಲಿ
ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವುದು ಕಷ್ಟಸಾಧ್ಯ. ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೋರಿಕೆಗೆ ಸಚಿವರು ಸ್ಪಂದಿಸಿದ್ದಾರೆ.
ಕ್ಷೇತ್ರದ ಶಾಲೆಗಳ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿ ಹಿಂದುಳಿದ ಮತ್ತು ಅಭಿವೃದ್ಧಿ ಕುಂಠಿತವಾಗಿರುವ ಶಾಲೆಗಳನ್ನು ಗುರುತಿಸಿ ಅವುಗಳನ್ನು ದತ್ತು ಯೋಜನೆಗೆ ಆಯ್ಕೆ ಮಾಡಿಕೊಂಡು, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಮಾಣಪತ್ರವನ್ನು ಸಚಿವರು ಪಡೆದಿದ್ದಾರೆ.
ಅಲ್ಲದೇ ಈ ಎಲ್ಲಾ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸಚಿವ ಜಾರಕಿಹೊಳಿ ರೂಪುರೇಷ ಸಿದ್ಧಪಡಿಸಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಕಾರ್ಯ ಜಿಲ್ಲೆಯ ಇತರ ಜನಪ್ರತಿನಿಧಿಗಳಿಗೂ ಮಾದರಿಯಾಗಿದೆ.