ಚಿಕ್ಕೋಡಿ (ಬೆಳಗಾವಿ): ರಾಜ ರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಉಪಚುನಾವಣೆಯಲ್ಲಿ ಡಿಕೆ ಬಂಡೆಯ ಯಾವ ಆಟ ಕೂಡ ನಡೆಯಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ ತಿರುಗೇಟು ನೀಡಿದ್ದಾರೆ.
ಹುಕ್ಕೇರಿ ಪಟ್ಟಣದಲ್ಲಿ ಕುಂಭದ್ರೋಣ ಮಳೆಯಿಂದ ಹಾಳಾದ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಆರ್ಆರ್ ನಗರ ಹಾಗೂ ಶಿರಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಅದರಲ್ಲಿ ಡೌಟೇ ಇಲ್ಲ. ಡೌಟ್ ಇರುವುದು ಕಾಂಗ್ರೆಸ್ ಪಕ್ಷದವರಿಗೆ ಮಾತ್ರ. ಆರ್ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಸುಮಾರು 40-50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಕಳೆದ ಚುನಾವಣೆಯಲ್ಲಿದ್ದ ನಾಯಕರು ಇಂದು ಬಿಜೆಪಿಯಲ್ಲಿದ್ದಾರೆ ಎಂದರು.
ಆರ್ಆರ್ ನಗರಕ್ಕೆ ನಾನೇ ಇಂಚಾರ್ಜ್ ಇದ್ದೇನೆ. ಇದನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ ಆರ್ಆರ್ ನಗರದಲ್ಲಿ ಯಾವ ಡಿಕೆ ಬಂಡೆ ಆಟ ಕೂಡ ನಡೆಯಲ್ಲ ಎಂದರು.
ನೆರೆ ವೀಕ್ಷಣೆಗೆ ಗೋವಿಂದ ಕಾರಜೋಳ ತೆರಳದೇ ಇರುವುದಕ್ಕೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಆದರೆ ಅವರ ಕುಟುಂಬಸ್ಥರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಅವರ ಮಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಶಿರಾ ಪ್ರಚಾರಕ್ಕೆ ತೆರಳಿರುವುದನ್ನೇ ದೊಡ್ಡ ಅಪರಾಧ ಎನ್ನುವುದು ತಪ್ಪು. ಅವರಿಗೆ ನೆಮ್ಮದಿಯಿಂದಿರಲು ಬಿಡಿ ಎಂದರು.
ಪರಿಹಾರ ಕಾರ್ಯಗಳಿಗೆ ಹಣದ ಕೊರತೆ ಆಗದಂತೆ ಕಂದಾಯ ಇಲಾಖೆಯಿಂದ ನಾನು ಕ್ರಮ ಕೈಗೊಳ್ಳುತ್ತೇನೆ. ಕಳೆದ ವರ್ಷದ ಪ್ರವಾಹ ಸಮಯದಲ್ಲಿ ನೀಡಿದಷ್ಟೇ ಪರಿಹಾರ ಕೊಡಲಾಗುತ್ತಿದೆ. ನಾಳೆ ಸಿಎಂ ಬಿಎಸ್ವೈ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಎನ್ಡಿಆರ್ಎಫ್ಗಿಂತ ಹೆಚ್ಚಿನ ಪರಿಹಾರ ಕೊಡುತ್ತೇವೆ ಎಂದರು.
ಸುಮಾರು 660 ಕೋಟಿ ರೂಪಾಯಿ ಜಿಲ್ಲಾಧಿಕಾರಿಗಳ ಅಕೌಂಟ್ನಲ್ಲಿ ಇದೆ. ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 60 ಕೋಟಿ ಹಣ ಇದೆ. ಹೆಚ್ಚುವರಿ ಅನುದಾನ ಕೊಡಲು ಕೂಡ ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದರು.