ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಹಾಲಿನ ದರ ಏರಿಕೆಗೆ ಆಗ್ರಹಿಸಿ ಸ್ವಾಭಿಮಾನಿ ರೈತ ಸಂಘಟನೆ ಕಾರ್ಯಕರ್ತರು ಸಾಂಗ್ಲಿ, ಮಿರಜ್ ನಗರಗಳಲ್ಲಿ ಹಾಲಿನ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ವಾಹನಗಳಲ್ಲಿದ್ದ ಸಾವಿರಾರು ಲೀಟರ್ ಹಾಲನ್ನು ರಸ್ತೆಗೆ ಸುರಿದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಹಸುವಿನ ಹಾಲು ಪ್ರತಿ ಲೀಟರ್‌ಗೆ 16-17 ರೂಪಾಯಿ ಹಾಗೂ ಎಮ್ಮೆ ಹಾಲು 27 ರೂಪಾಯಿಗೆ ಇಳಿಕೆ ಮಾಡಲಾಗಿದೆ ಎಂದು ಈ ವೇಳೆ ಅವರು ಕಿಡಿ ಕಾರಿದರು.
ಕೋವಿಡ್‌ಗೂ ಮುಂಚೆ ಹಾಲು ಉತ್ಪಾದಕರ ಒಕ್ಕೂಟ ಹಾಗೂ ಹಾಲಿನ ಡೈರಿಗಳು ಹಸುವಿನ ಹಾಲು ಲೀಟರ್‌ಗೆ 30 ರೂ. ಹಾಗೂ ಎಮ್ಮೆ ಹಾಲು 40 ರೂಪಾಯಿಗೆ ಖರೀದಿಸುತ್ತಿದ್ದವು. ಆದರೆ, ಈಗ ಹಾಲಿನ ದರ ಇಳಿಸಿವೆ. ಹೀಗಾದರೆ, ನಾವು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ರೈತರು ಅಳಲು ತೋಡಿಕೊಂಡರು.
ಕರ್ನಾಟಕ ಗಡಿಭಾಗದ ಚಿಕ್ಕೋಡಿ, ಅಥಣಿ, ಕಾಗವಾಡ, ರಾಯಬಾಗ, ನಿಪ್ಪಾಣಿ ತಾಲೂಕಿನ ರೈತರು ನಿತ್ಯ 50 ಸಾವಿರ ಲೀಟರ್ಗೂ ಅಧಿಕ ಹಾಲನ್ನು ಮಹಾರಾಷ್ಟ್ರದ ವರಣಾ, ಗೋಕುಲ ಹಾಗೂ ವಿವಿಧ ಖಾಸಗಿ ಡೈರಿಗಳಿಗೂ ಸರಬರಾಜು ಮಾಡುತ್ತಿದ್ದಾರೆ.