ಬೆಳಗಾವಿ: ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತೆ ಉದ್ಧಟತನ ಪ್ರದರ್ಶಿಸಿ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿಸುವವರೆಗೂ ಸುಮ್ಮನೇ ಕೂರಲ್ಲ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಮಹಾರಾಷ್ಟ್ರ- ಕರ್ನಾಟಕ ಸೀಮಾ ವಿವಾದ ಸಂಘರ್ಷ ಅನಿ ಸಂಕಲ್ಪ ಹೆಸರಿನ ಮರಾಠಿ ಪುಸ್ತಕ ಪುಸ್ತಕ ಬಿಡುಗಡೆ ಮಾಡಿದೆ. ಈ ವೇಳೆ ಮಾತನಾಡಿದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ನಾವು ನ್ಯಾಯಾಂಗ ನಿಂದನೆ ಮಾಡ್ತಿಲ್ಲ, ಕರ್ನಾಟಕ ಸರ್ಕಾರದಿಂದಲೇ ಈ ಕೆಲಸವಾಗ್ತಿದೆ. ಬೆಳಗಾಂವ್ ಅನ್ನ'ಬೆಳಗಾವಿ' ಎಂದು ಮರುನಾಮಕರಣ ಮಾಡಲಾಗಿದ್ದು, ಸುವರ್ಣಸೌಧ ಕಟ್ಟಿಸಿ ಅಧಿವೇಶನ ನಡೆಸುತ್ತಿದ್ದಾರೆ. ಬೆಳಗಾವಿಯನ್ನು ಎರಡನೇ ರಾಜಧಾನಿ ಅಂತ ಘೋಷಿಸಿದ್ದಾರೆ ಇದು ನ್ಯಾಯಾಂಗ ನಿಂದನೆ ಅಲ್ವಾ. ಕರ್ನಾಟಕ ಸರ್ಕಾರವೇ ಕಾನೂನು ಪಾಲನೆ ಮಾಡ್ತಿಲ್ಲ. ಕರ್ನಾಟಕದ ಎಲ್ಲ ಸರ್ಕಾರಗಳಿಂದ ಮರಾಠಿಗರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಬೆಳಗಾವಿ ಒಳಗೊಂಡಂತೆ ಕರ್ನಾಟಕ ವ್ಯಾಪ್ತಿಯ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಯೇ ತೀರುತ್ತೇವೆ. ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಆ ಪ್ರದೇಶವನ್ನು ಕೇಂದ್ರಾಳಿತ ಪ್ರದೇಶವನ್ನಾಗಿ ಮಾಡಬೇಕು ಎಂದರು.
ಮರಾಠಿ ಅಸ್ಮಿತೆ, ಮರಾಠಿಗರ ತಾಕತ್ತು ತೋರಿಸುವ ಕಾಲ ಬಂದಿದೆ. ಭಾಷಾವಾರು ಪ್ರಾಂತ್ಯ ರಚನೆ ವೇಳೆ ಅನ್ಯಾಯವಾಗಿದೆ. ಕನ್ನಡಿಗರು ಮಾಡುತ್ತಿರುವ ದೌರ್ಜನ್ಯವನ್ನು ನಾವು ಸಹಿಸಲ್ಲ. ಬೆಳಗಾವಿಯಲ್ಲಿ ಮರಾಠಿ ಭಾಷಿಕ ಶಾಸಕರು ಮತ್ತೆ ಆಯ್ಕೆ ಆಗಿ ಬರಬೇಕು. ಕರ್ನಾಟಕ ಸರ್ಕಾರ ಬೆನ್ನಿಗೆ ಚೂರಿ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.