ಬೆಳಗಾವಿ: ಮಹಾತ್ಮಾ ಗಾಂಧಿಯವರ 150 ನೇ ವರ್ಷಾಚರಣೆ ಅಂಗವಾಗಿ, ಚಿಕ್ಕೋಡಿ ಲೋಕಸಭಾ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಇಂದು ಹುದಲಿ ಗ್ರಾಮದಲ್ಲಿ ಪಾದಯಾತ್ರೆ ಪ್ರಾರಂಭಿಸಿದರು.
ಬಿಜೆಪಿ ಲೋಕಸಭಾ ಕ್ಷೇತ್ರದಲ್ಲಿ ಮಹಾತ್ಮಾ ಗಾಂಧಿಜೀಯವರ ತತ್ವ ಆದರ್ಶ ಪ್ರಚಾರ ಮಾಡಲು ಪಾದಯಾತ್ರೆ ಹಮ್ಮಿಕೊಂಡಿದ್ದು, ಅಣ್ಣಾಸಾಹೇಬ್ ಜೊಲ್ಲೆ ಇಂದು ಪಾದಯಾತ್ರೆ ಕೈಗೊಂಡರು. ಮಹಾತ್ಮಾ ಗಾಂಧಿಜಿಯವರು ಬೆಳಗಾವಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲ್ಲೆಯ ಹುದಲಿ ಗ್ರಾಮಕ್ಕೆ ಭೇಟಿ ನೀಡಿ ಏಳು ದಿನಗಳ ಕಾಲ ವಾಸ್ತವ್ಯ ಹೂಡಿದ್ದರು. ಗಾಂಧೀಜಿಯವರ 150 ನೇ ವರ್ಷಾಚರಣೆ ಅಂಗವಾಗಿ ಬಿಜೆಪಿ ಎಲ್ಲಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 150 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದು, ಇಂದು ಜೊಲ್ಲೆ ಹುದಲಿ ಗ್ರಾಮದಿಂದ ಪಾದಯಾತ್ರೆ ಹಮ್ಮಿಕೊಂಡರು.
ಈ ಪಾದಯಾತ್ರೆ ಕುರಿತು ಮಾತನಾಡಿದ ಸಂಸದ ಜೊಲ್ಲೆ, ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಜಯಂತಿ ನಿಮಿತ್ತ ಜನಾಂದೋಲನ ಆಗುವ ನಿಟ್ಟಿನಲ್ಲಿ ಎಲ್ಲಾ ಸಂಸದರು ಪಾದಯಾತ್ರೆ ನಡೆಸಬೇಕೆಂದು ಸೂಚನೆ ನೀಡಿದ್ದಾರೆ. ಕೇಂದ್ರದ ನಾಯಕರ ಸೂಚನೆ ಮೇರೆಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 150 ಕಿ.ಮಿ ಗಿಂತಲೂ ಹೆಚ್ಚು ಪಾದಯಾತ್ರೆ ಮಾಡಲಾಗುವುದೆಂದರು.