ಬೆಳಗಾವಿ: ಕೊಲೆಗೆ ಯತ್ನಿಸಿದ ಆರೋಪಿಯೊಬ್ಬರಿಗೆ 2 ವರ್ಷ ಕಠಿಣ ಜೈಲು ಶಿಕ್ಷೆ 26 ಸಾವಿರ ರೂ. ದಂಡ ವಿಧಿಸಿ ಬೆಳಗಾವಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಪ್ರಕಟಿಸಿದೆ. ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ಮಾರುತಿ ಹನುಮಂತ ಹಗೇದ ಕೊಲೆಗೆ ಯತ್ನ ಆರೋಪದಲ್ಲಿ ಶಿಕ್ಷೆಗೆ ಗುರಿಯಾದವನು.
ಪ್ರಕರಣ ಹಿನ್ನೆಲೆ:
ಕಟಕೋಳ ಗ್ರಾಮದ ಹೊರವಲಯದಲ್ಲಿ ತಂದೆಯ ಆಸ್ತಿಗಾಗಿ ಸಹೋದರರ ನಡುವೆ ಕಿತ್ತಾಟ ನಡೆದಿದೆ. ಈ ವೇಳೆ ಹಿರಿಯರ ಸಮ್ಮುಖದಲ್ಲಿ ನಡೆದ ಜಮೀನು ಪಾಲುದಾರಿಕೆಯ ಸಂಧಾನದಲ್ಲಿ ತಂದೆಗೆ ಒಂದಿಷ್ಟು ಜಮೀನು, ಅದರ ಜೊತೆಗೆ ಸಾಲ ಬರುತ್ತದೆ. ಈ ಸಂದರ್ಭದಲ್ಲಿ ಆರೋಪಿಯ ತಂದೆ ಹನುಮಂತ ನನಗೆ ಬಂದಿರುವ ಜಮೀನನ್ನು ನೀವೇ ಯಾರಾದರೂ ತೆಗೆದುಕೊಳ್ಳಿ. ಆದ್ರೆ, ಸಾಲವನ್ನು ನನಗೆ ಹೊರೆಸಬೇಡಿ ಎಂದಿದ್ದಾನೆ. ಈ ವೇಳೆ ಆರೋಪಿ ಮತ್ತೊಬ್ಬ ಸಹೋದರ ಕಲ್ಲೋಳೆಪ್ಪ ತಂದೆಗೆ ಬಂದಿರುವ ಆಸ್ತಿ ಮತ್ತು ಸಾಲವನ್ನು ತೆಗೆದುಕೊಳ್ಳಲು ಒಪ್ಪಿಕೊಳ್ಳುತ್ತಾನೆ. ಇದಾದ ಕೆಲವೂ ದಿನಗಳ ಬಳಿಕ ಆಸ್ತಿ ಸಂಬಂಧ ಆರೋಪಿ ತನ್ನ ಸಹೋದರನಿಗೆ ನಿತ್ಯ ಕಾಲು ಕೆರೆದು ವಿನಾಕಾರಣ ಜಗಳಕ್ಕೆ ನಿಲ್ಲುತ್ತಾನೆ.
4-07-2018ರಂದು ಕಲ್ಲೋಳೆಪ್ಪ ತನ್ನ ಹೊಲದಲ್ಲಿ ಕೆಲಸ ಮಾಡುವ ಸ್ಥಳಕ್ಕೆ ತೆರಳಿದ ಆರೋಪಿ ಮಾರುತಿ ಕಲ್ಲೋಳೆಪ್ಪನ ಜೊತೆಗೆ ಜಗಳಕ್ಕೆ ನಿಲ್ಲುತ್ತಾನೆ. ಈ ಸಂದರ್ಭದಲ್ಲಿ ಆರೋಪಿ ಮಾರುತಿ ತನ್ನ ಸಹೋದರ ಕಲ್ಲೋಳೆಪ್ಪ ಹಗೇದ ಮೇಲೆ ಕೊಡಲಿಯಿಂದ ಹೊಡೆದು ಕೊಲೆಗೆ ಯತ್ನಿಸುತ್ತಾನೆ. ಈ ವೇಳೆ ಜಗಳ ಬಿಡಿಸಲು ಬಂದ ನಿಂಗಪ್ಪ ತ್ಯಾಪಿ ಎಂಬುವವರ ಮೇಲೆಯೂ ಕೊಡಲೆಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸುತ್ತಾನೆ. ಈ ಸಂಬಂಧ ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ.
ಪ್ರಕರಣ ದಾಖಲಿಸಿಕೊಂಡ ಅಂದಿನ ಪಿಎಸ್ಐ ಎಸ್.ಎನ್.ನಾಯಕ ಎಂಬುವವರು ನ್ಯಾಯಾಲಯಕ್ಕೆ ಸಮಗ್ರ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸುತ್ತಾರೆ. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಎ.ಜೋಶಿ ಅವರು, ಆರೋಪಿಗೆ ಎರಡು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 26 ಸಾವಿರ ರೂ. ದಂಡವನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಎಂ.ಎಲ್. ಜೋಶಿ ವಾದ ಮಂಡಿಸಿದ್ದಾರೆ.