ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಮಚ್ಚೆ ಗ್ರಾಮದಲ್ಲಿ ಬೈಕ್ ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಜಗಳದಲ್ಲಿ ಓರ್ವ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ. ಕೊಲೆಯಾದ ಯುವಕ ಮಜಗಾಂವ ಗ್ರಾಮದ ಪ್ರತೀಕ್ ಲೋಹಾರ (21) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಘಟನೆ ವಿವರ: ದ್ವಿಚಕ್ರ ವಾಹನ ನಿಲುಗಡೆ ವಿಚಾರವಾಗಿ ಮಚ್ಚೆ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೇರುತ್ತಿದ್ದಂತೆ ಗ್ರಾಮಸ್ಥರು ಎರಡು ಗುಂಪುಗಳ ಯುವಕರನ್ನು ಸಮಾಧಾನಪಡಿಸಿ ಕಳಿಸಿದ್ದರು. ಕೊಲೆಯಾದ ಪ್ರತೀಕ್ ಲೋಹಾರ ಹಾಗೂ ಅವನ ಸ್ನೇಹಿತ ಶುಭಂ ಸುಳಗೇಕರ ಎಂಬುವರು ಬೈಕ್ ಮೇಲೆ ಹೋಗುವಾಗ ಜಗಳವಾಡಿ ಹೋಗಿರುವ ಇನ್ನೊಂದು ಗುಂಪು ಯಳ್ಳೂರು ರಸ್ತೆಯಲ್ಲಿ ಮತ್ತೆ ಅಡ್ಡಗಟ್ಟಿ ಪ್ರತೀಕ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ದಾಳಿಯ ತೀವ್ರತೆಗೆ ಪ್ರತೀಕ ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಅಷ್ಟಾದರೂ ಬಿಡದೆ ಮತ್ತೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಶುಭಂ ಸುಳಗೇಕರ ಎಂಬಾತ ಗಂಭೀರವಾಗಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನ್ನ ಸ್ನೇಹಿತ ನನಗೆ ಕರೆ ಮಾಡಿದ, ಈ ರೀತಿ ಗಲಾಟೆ ಆಗಿದೆ ಎಂದು ತಿಳಿಸಿದ. ಅಲ್ಲಿ ದ್ವಿಚಕ್ರ ವಾಹನ ನಿಲುಗಡೆ ವಿಚಾರವಾಗಿ ಜಗಳ ನಡೆಯಿತು. ಆ ವೇಳೆ ಮಧ್ಯೆ ಹೋದ ನನಗೂ ಹಣೆಯ ಮೇಲೆ ಗಾಯವಾಯಿತು. ಸ್ನೇಹಿತ ಪ್ರತೀಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಬೈಕ್ ಪಾರ್ಕಿಂಗ್ ವಿಚಾರವಾಗಿ ಗಲಾಟೆ ನಡೆದು ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಈಗಾಗಲೇ ಗಲಾಟೆಗೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಲ್ಲೆಗೆ ಒಳಗಾಗಿರುವ ಯುವಕ ಸ್ವಪ್ನಿಲ್ ಸುತಾರ ತಿಳಿಸಿದ್ದಾರೆ.
ಊಟದ ತಟ್ಟೆ ತೊಳೆಯುವ ವಿಚಾರಕ್ಕೆ ನಡೆದ ಗಲಾಟೆ.. ಕೊಲೆಯಲ್ಲಿ ಅಂತ್ಯ: ಇನ್ನೊಂದೆಡೆ ಊಟದ ತಟ್ಟೆ ತೊಳೆಯುವ ವಿಚಾರವಾಗಿ ನಡೆದ ಮಾತಿನ ಚಕಮಕಿ ಯುವಕನೊಬ್ಬನ ಹತ್ಯೆಯ ಮೂಲಕ ಅಂತ್ಯ ಕಂಡ ಘಟನೆ ಮಂಗಳೂರಿನ ಮರವೂರು ಗ್ರಾಮದ ಕೋಸ್ಟಲ್ ಸೈಟ್ನಲ್ಲಿ ನಡೆದಿದೆ. ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಮಹರಾಜ್ ಘಂಜ್‌ನ ಹರ್ ಪುರದ ಸಂಜಯ್ (28) ಕೊಲೆಯಾಗಿದ್ದಾನೆ. ಮಹರಾಜ್ ಘಂಜ್‌ನ ಬದಲಸಲುಯ ಖುರ್ದ್‌ನ ಸೋಹನ್ ಯಾದವ್(19) ಆರೋಪಿ ಎಂದು ತಿಳಿದುಬಂದಿದೆ.
ವಿವರ: ಬಜಪೆ ಠಾಣಾ ವ್ಯಾಪ್ತಿಯ ಮರವೂರು ಗ್ರಾಮದ ಕೋಸ್ಟಲ್ ಗಾರ್ಡ್ ಸೈಟ್ನಲ್ಲಿ ಕೂಲಿ ಕಾರ್ಮಿಕರಾಗಿ ಸಂಜಯ್ ಮತ್ತು ಸೊಹಾನ್ ಯಾದವ್ ಕೆಲಸ ಮಾಡುತ್ತಿದ್ದರು. ಎಂದಿನಂತೆ ಮಾರ್ಚ್ 5ರಂದು ಊಟ ಮುಗಿಸಿ ತಟ್ಟೆ ತೊಳೆಯಲು ಹೋಗಿದ್ದಾಗ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಈ ಗಲಾಟೆ ಮೊದಲು ಪರಸ್ಪರ ಮಾತಿಗೆ ಮಾತು ಬೆಳೆದು ಶುರುವಾಗಿದ್ದು, ಕೋಪಗೊಂಡ ಸೊಹನ್ ಯಾದವ ಸಂಜಯ್‌ನನ್ನು ಬಲವಾಗಿ ನೆಲಕ್ಕೆ ತಳ್ಳಿದ್ದಾನೆ.
ಪರಿಣಾಮ ಸಂಜಯ ಹಿಮ್ಮುಖವಾಗಿ ಬಿದ್ದು ಆತನ ತಲೆಗೆ ಗಂಭೀರವಾದ ಗಾಯವಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಈ ಘಟನೆ ನಡೆದ ಬಳಿಕ ಆರೋಪಿ ಸೋಹನ್ ಯಾದವ್ ಸ್ಥಳದಿಂದ ಪರಾರಿಯಾಗಿದ್ದ. ಈತ ಮಾರ್ಚ್ 7 ರಂದು ಮಧ್ಯಾಹ್ನ 1 ಗಂಟೆಯ ವೇಳೆಗೆ ಊರಿಗೆ ಹೋಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಬಜಪೆ ಪೊಲೀಸರು ಮಂಗಳೂರು ರೈಲ್ವೆ ನಿಲ್ದಾಣದ ಬಳಿ ವಶಕ್ಕೆ ಪಡೆದು ನಂತರ ಬಂಧಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಹೈಟೆಕ್ ರೈಸ್ ಪುಲ್ಲಿಂಗ್ ದಂಧೆ : ಎಂಟು ಮಂದಿ ಆರೋಪಿಗಳ ಬಂಧನ