ಅಥಣಿ: ಕಳೆದ ಜೂನ್ 28ರಂದು ತಾಲೂಕಿನ ಹಲ್ಯಾಳ ಗ್ರಾಮದ ಒಂದೇ ಕುಟುಂಬದ ನಾಲ್ವರು ಸಹೋದರರು ಕೃಷ್ಣಾ ನದಿಯಲ್ಲಿ ಹಾಸಿಗೆ ಒಗೆಯಲು ಹೋಗಿ ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ಪರಿಹಾರ ಧನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಮನವಿ ಸಲ್ಲಿಸುತ್ತೇನೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.
ಇಂದು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಕ್ಷೇತ್ರದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹಾಗೂ ನಾನು ಈ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ಸರ್ಕಾರದಿಂದ ಅವರಿಗೆ ಪರಿಹಾರ ಧನ ನೀಡುವ ಪ್ರಯತ್ನ ಮಾಡುತ್ತೇವೆ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ. ನನ್ನ ಕಡೆಯಿಂದಲೂ ವೈಯಕ್ತಿಕ ಸಹಾಯ ಮಾಡುತ್ತೇನೆಂದು ಶಾಸಕ ಕುಮಟಳ್ಳಿ ಭರವಸೆ ನೀಡಿದರು.
ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ದಾರುಣ ಅಂತ್ಯ ಕಂಡ ನಾಲ್ವರು ಸಹೋದರರು.. ಗ್ರಾಮದಲ್ಲಿ ಮಡುಗಟ್ಟಿದ ಶೋಕ
ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಮಹೇಶ್ ಕುಮಟಳ್ಳಿ ಹಲ್ಯಾಳ ಗ್ರಾಮದ ಬನಸೋಡೆ ಕುಟುಂಬಕ್ಕೆ ಭೇಟಿ ನೀಡುತ್ತಿದ್ದಂತೆ, ಮನೆ ಸದಸ್ಯರ ಆಕ್ರಂದನ ಮುಗಿಲುಮುಟ್ಟಿತ್ತು. ಶಾಸಕ ಕುಮಟಳ್ಳಿ ಅವರಿಗೆ ಅಥಣಿ ತಾಲೂಕು ಆಡಳಿತ ಸಾಥ್ ನೀಡಿತ್ತು.