ಬೆಳಗಾವಿ: ಜಿಲ್ಲೆಯಲ್ಲಿ ಈ ವರ್ಷವೂ ವರುಣನ ಆರ್ಭಟ ಹೆಚ್ಚಾಗಿದೆ. ಅಲ್ಲದೆ, ಕಳೆದ ಜೂನ್ ಒಂದರಿಂದ ಈವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ 990 ಮನೆಗಳು, 1,000 ಕಿ.ಮೀ ರಸ್ತೆ ಹಾಗೂ 18 ಸೇತುವೆಗಳಿಗೆ ಹಾನಿಯಾಗಿದೆ.
ಮಳೆ ಅವಾಂತರ: ಮಹಾರಾಷ್ಟ್ರ ಘಟ್ಟಪ್ರದೇಶ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಹಳೇ ಮನೆಗಳು ಕುಸಿಯುತ್ತಿವೆ. ಸವದತ್ತಿ ತಾಲೂಕಿನ ಏಣಗಿ ಗ್ರಾಮದಲ್ಲಿ ನಬಿಸಾಬ್ ಸುತಗಟ್ಟಿ ಎಂಬುವರಿಗೆ ಸೇರಿದ ಮನೆ ಗೋಡೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಕಳೆದ ಎರಡು ದಿನಗಳಲ್ಲಿ 5ಮನೆಗಳು ನೆಲಸಮವಾಗಿದ್ದು, ಜೂನ್ ಒಂದರಿಂದ ಈವರೆಗೆ ಒಟ್ಟು 990 ಮನೆಗಳಿಗೆ ಹಾನಿಯಾಗಿದೆ. 40 ಮನೆಗಳು ಸಂಪೂರ್ಣ ಕುಸಿದಿವೆ. 950ಮನೆಗಳಿಗೆ ಭಾಗಶಃ ಹಾನಿಯಾಗಿದೆ. 1,000 ಕಿ.ಮೀ ರಸ್ತೆ ಹಾಳಾಗಿದ್ದಲ್ಲದೇ, 1,300ವಿದ್ಯುತ್ ಕಂಬಗಳು, 18 ಸೇತುವೆಗಳಿಗೆ ಹಾನಿಯಾಗಿದೆ. ಮಳೆಗೆ ಬಲಿಯಾದ ಇಬ್ಬರ ಕುಟುಂಬಕ್ಕೆ ಜೀವಹಾನಿ ಪರಿಹಾರವನ್ನು ವಿತರಿಸಲಾಗಿದೆ.
ಐದು ಸೇತುವೆಗಳು ಜಲಾವೃತ: ಘಟಪ್ರಭಾ ನದಿಗೆ ಒಳಹರಿವು ಹೆಚ್ಚಾಗಿದೆ. ಪರಿಣಾಮ ಗೋಕಾಕ ತಾಲೂಕಿನ ಹಿರಣ್ಯಕೇಶಿ ನದಿ ಮೈದುಂಬಿ ಹರಿಯುತ್ತಿದೆ. ಜೊತೆಗೆ ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಒಟ್ಟು ಐದು ಸೇತುವೆಗಳು ಜಲಾವೃತವಾಗಿದೆ. ಅದರಲ್ಲಿ ಅವರಾಧಿ ಹಾಗೂ ಮಹಾಲಿಂಗಪೂರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ, ಸುಣಧೋಳ ಹಾಗೂ ಮೂಡಲಗಿಗೆ ಸಂಪರ್ಕ ಕಲ್ಪಿಸುವ ಸೇತುವೆ, ವಡೇರಹಟ್ಟಿ ಹಾಗೂ ಉದಗಟ್ಟಿಗೆ ಸಂಪರ್ಕ ಕಲ್ಪಿಸುವ ಸೇತುವೆ, ಕಮಲದಿನ್ನಿ ಹಾಗೂ ಹುಣಶ್ಯಾಳ ಪಿವೈಗೆ ಸಂಪರ್ಕ ಕಲ್ಪಿಸುವ ಸೇತುವೆ, ಗೋಕಾಕದಿಂದ ಶಿಂಗಳಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಂಪರ್ಕ ಸೇತುವೆಯೂ ಮುಳುಗಡೆ ಆಗಿದ್ದರಿಂದ ಈ ಭಾಗದಲ್ಲಿ ಜನ ಸಂಚಾರ ಬಂದ್ ಆಗಿದೆ.
ಸಂಚಾರಕ್ಕೆ ನಿರ್ಬಂಧ: ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಐದು ಸೇತುವೆಗಳಲ್ಲಿ ಎರಡು ಬದಿಗೆ ಪೊಲೀಸರು ಬ್ಯಾರಿಕೇಡ್ ಹಾಕಿ ಜನ ಸಂಚಾರವನ್ನು ನಿರ್ಬಂಧಿಸಿದ್ದಾರೆ. ಘಟಪ್ರಭಾ ನದಿತೀರದಲ್ಲಿ ಬರುವ ಮೂಡಲಗಿ-ಗೋಕಾಕ ತಾಲೂಕಿನ ಭಾಗದಲ್ಲಿ ಮತ್ತೆ ನೆರೆಹಾವಳಿ ಮರುಕಳಿಸುವ ಆತಂಕ ಜನರನ್ನು ಕಾಡುತ್ತಿದೆ. ಮಾರ್ಕಂಡೇಯ ನದಿ, ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿ ಉಕ್ಕಿ ಹರಿಯುತ್ತಿದ್ದು ಘಟಪ್ರಭಾ ನದಿಗೆ 17,000 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಹೆಚ್ಚಾಗಿದೆ.
ಕೃಷಿ ಭೂಮಿ ಜಲಾವೃತ: ಬಳ್ಳಾರಿ ನಾಲಾ ನೀರು ನುಗ್ಗಿ ಯಳ್ಳೂರು ಸುತ್ತಮುತ್ತ ನೂರಾರು ಎಕರೆ ಭತ್ತದ ಗದ್ದೆ ಜಲಾವೃತವಾಗಿದೆ. ಕಳೆದ ತಿಂಗಳಷ್ಟೇ ನಾಟಿ ಮಾಡಿದ್ದ ಭತ್ತ ಮಳೆಯಿಂದಾಗಿ ಸಂಪೂರ್ಣವಾಗಿ ಹಾನಿಯಾಗಿತ್ತು. ಇದೀಗ ಮತ್ತೆ ಎರಡನೇ ಬಾರಿ ನಾಟಿ ಮಾಡಿದ್ದ ಭತ್ತದ ಬೆಳೆ ಸಂಪೂರ್ಣ ಮುಳುಗಡೆ ಆಗಿದ್ದು ಯಳ್ಳೂರು, ವಡಗಾವಿ, ಶಹಾಪುರ, ಧಾಮನೆ ಸೇರಿ ಬಳ್ಳಾರಿ ನಾಲಾ ವ್ಯಾಪ್ತಿಯ ಗ್ರಾಮಗಳ ರೈತರು ಮತ್ತಷ್ಟು ಸಂಕಷ್ಟ ಎದುರಿಸುವ ದುಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗೆ ಬಳ್ಳಾರಿ ನಾಲಾ ಸುಧಾರಣೆಗೆ ಸರ್ಕಾರ ಮುಂದಾಗಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಮಳೆಯಿಂದ ಕೋಡಿ ಬಿದ್ದ ಕೆರೆ; ಗ್ರಾಮಸ್ಥರಿಂದ ಭರ್ಜರಿ ಮೀನು ಬೇಟೆ
ರಕ್ಕಸಕೊಪ್ಪ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಬೆಳಗಾವಿ ತಾಲೂಕಿನ ಅಂಬೇವಾಡಿ, ಮಣ್ಣೂರು ಗ್ರಾಮದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಭತ್ತ, ಕಬ್ಬು ಗದ್ದೆಗೆ ಮಾರ್ಕಂಡೇಯ ನದಿ ನೀರು ನುಗ್ಗಿದೆ. ಕಳೆದ ಮೂರು ವರ್ಷಗಳಿಂದಲೂ ಈ ಭಾಗ ಪ್ರವಾಹಕ್ಕೆ ತತ್ತರಿಸಿದೆ.